ಉಡುಪಿ: ಮಾದಕ ವ್ಯಸನ ವಿರುದ್ಧ ಜಾಗೃತಿ ಉಪನ್ಯಾಸ ಕಾರ್ಯಕ್ರಮ

ಉಡುಪಿ: ಜಮೀಯ್ಯುತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಉಡುಪಿ ಜಾಮೀಯ ಮಸೀದಿಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಜಾಗೃತೆ ವಹಿಸಬೇಕು. ಮಾದಕ ದ್ರವ್ಯ ಎಂಬುದು ಇಂದು ಶಿಕ್ಷಣ ಸಂಸ್ಥೆಗಳಿಗೂ ಹಬ್ಬಿರುವುದು ಖೇದಕರ. ಇದರಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಮಾತನಾಡಿ, ಕೇವಲ ಪಠ್ಯ ಪುಸ್ತಕಗಳ ಶಿಕ್ಷಣಕ್ಕೆ ಆದ್ಯತೆ ನೀಡದೆ ಮಕ್ಕಳಿಗೆ ಬದುಕು ರೂಪಿಸುವ ಶಿಕ್ಷಣವನ್ನು ಕಲಿಸಬೇಕು. ಮೌಲ್ಯಯುತ ಶಿಕ್ಷಣದಿಂದ ಮಕ್ಕಳು ಇಂತಹ ಚಟಗಳಿಂದ ದೂರ ಇರಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ವಹಿಸಿದ್ದರು. ಕಾರ್ಯದರ್ಶಿ ಸಮೀರ್ ಎಂ. ವಂದಿಸಿದರು. ಕೋಶಾಧಿಕಾರಿ ನಝೀರ್ ನೇಜಾರ್ ಉಪಸ್ಥಿತರಿದ್ದರು. ಫಾಜಿಲ್ ಆದಿಉಡುಪಿ ಕಾರ್ಯಕ್ರಮ ನಿರೂಪಿಸಿದರು.







