ಅಸಾಂಕ್ರಾಮಿಕ ರೋಗಗಳಿಗೆ ಆಯುರ್ವೇದವೇ ಪರಿಹಾರ: ಡಾ.ಭಗವಾನ್

ಉಡುಪಿ, ನ.29: ವಿಶ್ವವು ಅಸಾಂಕ್ರಾಮಿಕ ರೋಗಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರಿಹಾರದ ಹುಡುಕಾಟದಲ್ಲಿದೆ. ಇಂಥ ಸನ್ನಿವೇಶದಲ್ಲಿ ಆಯುರ್ವೇದವೇ ಭವಿಷ್ಯವಾಗಿದ್ದು, ಇದಕ್ಕೆ ಪರಿಹಾರವಾಗಿದೆ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ಹೇಳಿದ್ದಾರೆ.
ಉದ್ಯಾವರ ಸಮೀಪದ ಕುತ್ಪಾಡಿಯಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಭಾವಪ್ರಕಾಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಕಾಲೇಜಿನ ‘ವಿಶಿಖಾನುಪ್ರವೇಶ’ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಚಿನ್ನದ ಪದಕಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಡಾ.ಭಗವಾನ್ ಅವರು, ಇಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರೇ ಪದವಿ ಪಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಆಯುರ್ವೇದ ವೈದ್ಯರಾಗಿ ಹೊರಬರುತ್ತಿರುವ ತಾವು ಕ್ಲಿನಿಕಲ್ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಒತ್ತು ನೀಡುವಂತೆ ಕರೆ ನೀಡಿದರು.
ಭಾರತದಲ್ಲಿ ಹುಟ್ಟಿರುವ ಆಯುರ್ವೇದ ಮತ್ತು ಯೋಗವನ್ನು ಈಗ ಜಾಗತಿಕವಾಗಿ ಸ್ವೀಕರಿಸಲಾಗಿದೆ. ಆಯುರ್ವೇದ ಸಮಗ್ರ ವೈದ್ಯ ಪದ್ಧತಿಯಾಗಿದ್ದು, ಉಳಿದ ವೈದ್ಯಕೀಯ ಪದ್ಧತಿಗಳಿಗೆ ಹೋಲಿಸಿದರೆ, ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ರೋಗಿಯ ರೋಗವನ್ನು ಗುಣಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಎಐ, ರೊಬೋಟಿಕ್, ಸೋನಾಲಜಿ ಯುಗದಲ್ಲಿ ಹಾಗೂ ವೇಗವಾಗಿ ಪ್ರಗತಿಕಾಣುತ್ತಿರುವ ತಂತ್ರಜ್ಞಾನದ ಯುಗದಲ್ಲಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದೇ ನಿಜವಾದ ಪರಿಹಾರವಾಗಿದೆ ಎಂದ ಡಾ.ಭಗವಾನ್, ವೈದ್ಯರಾಗಿ ತೇರ್ಗಡೆಗೊಂಡಿರುವ ನೀವು ನಿಮ್ಮ ರೋಗಿಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದರು.
ಪರಿಶುದ್ಧ ಆಯುರ್ವೇದವನ್ನು ಚಿಕಿತ್ಸೆಯ ವೇಳೆ ಅಳವಡಿಸಿಕೊಳ್ಳುವಂತೆ ಸೂಚಿಸಿದ ಕುಲಪತಿಗಳು, ವಿವಿಧ ವೈದ್ಯಕೀಯ ಪದ್ಧತಿಗಳನ್ನು ಇದರೊಂದಿಗೆ ಸಮ್ಮಿಳಿತಗೊಳಿಸದಂತೆ ಮನವಿ ಮಾಡಿದರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿಯಾಗಿ ವಿದ್ಯಾರ್ಥಿಗಳನ್ನು ಮಾದಕ ವ್ಯಸನದಿಂದ ದೂರಮಾಡಲು ನಡೆಸುತ್ತಿರುವ ‘ನಶಾ ಮುಕ್ತ ಅಭಿಯಾನ’ ತನಗೆ ತೃಪ್ತಿ ನೀಡಿದೆ ಎಂದರು.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಮಮತಾ ಕೆ.ವಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗಿಗಳ ಬದುಕಿನಲ್ಲಿ ಪ್ರತಿ ದಿನ ಬದಲಾವಣೆ ತರಲು ವೈದ್ಯರಾಗಿ ಸತತ ಪ್ರಯತ್ನ ನಡೆಸುವಂತೆ ಯುವ ವೈದ್ಯರಿಗೆ ಕರೆ ನೀಡಿದರು. ಇದಕ್ಕಾಗಿ ತಮ್ಮ ಕಾರ್ಯದಲ್ಲಿ ಮಾನವೀಯತೆ ಹಾಗೂ ಹೃದಯದಲ್ಲಿ ಸಹಾನುಭೂತಿಯನ್ನು ಪ್ರತಿ ವೈದ್ಯರು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಮಧುಸೂದನ್, ಸೆನೆಟ್ ಸದಸ್ಯರಾದ ಡಾ.ಸಂಕನಗೌಡ ಪಾಟೀಲ್ ಹಾಗೂ ಬೋರ್ಡ್ ಆಫ್ ಸ್ಟಡೀಸ್ (ಸ್ನಾತಕ) ವಿಭಾಗದ ಅಧ್ಯಕ್ಷರಾದ ಡಾ.ಲೀಲಾಧರ್ ಡಿ. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮುಖ್ಯಾಧಿಕಾರಿ ಡಾ. ಪ್ರಶಾಂತ್ ಕೆ. 68 ಸ್ನಾತಕ ಮತ್ತು 50 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಸ್ವಾಗತಿಸಿದರೆ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಶ್ರೀಕಾಂತ್ ಪಿ. ವಂದಿಸಿದರು. ಸಹ ಪ್ರಾಧ್ಯಾಪಕ ಡಾ.ಅರ್ಹಂತ್ ಕುಮಾರ್ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ಇಬ್ಬರಿಗೆ ಚಿನ್ನದ ಪದಕ :
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ.ಅರುಂಧತಿ ಪ್ರಸಾದ್ ಮತ್ತು ಡಾ.ಅಪರ್ಣ ಎಂ.ಎಸ್. ಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ಸ್ನಾತಕ ವಿದ್ಯಾರ್ಥಿ ಡಾ.ಇಂಪನ ಪರಶುರಾಮ ಅಗಡಿಗೆ 2024ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಪ್ರಮಾಣ ಪತ್ರ ನೀಡಲಾಯಿತು.
ಇದೇ ವೇಳೆ ಅತಿಥಿಗಳು ಕಾಲೇಜಿನ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಗದಾನದ ಪ್ರತಿಜ್ಞಾ ಬೋಧನೆಯನ್ನು ನೆರವೇರಿಸಿದರು.







