ಬಡಗುಪೇಟೆ | ಹೊಂಡಗುಂಡಿಗಳಿರುವ ರಸ್ತೆಯ ದುರಸ್ತಿಗೆ ಆಗ್ರಹ

ಉಡುಪಿ, ಡಿ.10: ಬಡಗುಪೇಟೆ ವಾರ್ಡಿನ ವಾಸುಕಿ ಅನಂತ ಪದ್ಮನಾಭ ದೇವಸ್ಥಾನ ರಸ್ತೆಯು ಶ್ರೀಕೃಷ್ಣ ಮಠ, ಮುಕುಂದಕೃಪ ಶಾಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಹೊಂಡ ಗುಂಡಿಗಳಿಂದಾಗಿ ಸಂಚಾರ ಕಷ್ಟಕರವಾಗಿ ಸಾರ್ವಜನಿಕರು ಪ್ರಯಾಸಪಡುವ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆಯ ನಡುವಿನ ತಳದಲ್ಲಿದ್ದ ಡ್ರೈನೇಜ್ ಕೊಳವೆಗಳನ್ನು ಬದಲಿಸುವ ಕಾಮಗಾರಿ ನಡೆದಿತ್ತು. ಗುಂಡಿ ಅಗೆದಿರುವ ಸ್ಥಳದಲ್ಲಿ ಜಲ್ಲಿಕಲ್ಲು, ಜಲ್ಲಿಹುಡಿ ಹಾಕಿ ಮುಚ್ಚಿಡಲಾಗಿತ್ತು. ಇದೀಗ ಗುಂಡಿ ತೋಡಿರುವ ಸ್ಥಳವು ಕುಸಿತ ಗೊಂಡಿದ್ದು, ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿವೆ.
ಕಿರುದಾಗಿರುವ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ರಸ್ತೆಯು ಹದಗೆಟ್ಟ ಕಾರಣದಿಂದ ಅಪಘಾತಗಳು ಸಂಭವಿಸುವುದು ಕಂಡುಬರುತ್ತಿವೆ. ಶಾಲಾ ವಿದ್ಯಾರ್ಥಿಗಳು, ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರು ಧೂಳುಣ್ಣಬೇಕಾದ ಪರಿಸ್ಥಿತಿ ಇಲ್ಲಿ ಉದ್ಭವಿಸಿದೆ.
ಧೂಳೇಳುವ ರಸ್ತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಶ್ವಾಸಕೋಶ, ಕಣ್ಣಿನ ತೊಂದರೆಗಳಿಗೆ ತುತ್ತಾಗಬೇಕಾದ ಅಪಾಯಕರ ಸ್ಥಿತಿಯು ಎದುರಾಗಿದೆ. ಜಿಲ್ಲಾಡಳಿತ, ನಗರಾಡಳಿತ ತಕ್ಷಣವಾಗಿ ದುಸ್ಥಿತಿಯಲ್ಲಿರುವ ವಾಸುಕಿ ಅನಂತ ಪದ್ಮನಾಭ ರಸ್ತೆಯನ್ನು ಡಾಮರೀಕರಣ ಮಾಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.







