ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಜಾಮೀನು ಆಘಾತಕಾರಿ: ಸಾಲಿಡಾರಿಟಿ ಉಡುಪಿ

ಉಡುಪಿ, ನ.18: 2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಮೂರು ವರ್ಷದ ಮಗು ಸೇರಿದಂತೆ ಕುಟುಂಬದ 14 ಜನರನ್ನು ಹತ್ಯೆ ಮಾಡಿದ ಭೀಕರ ಪ್ರಕರಣದ ಅಪರಾಧಿಗಳಾದ ಬಿಪಿನ್ಚಂದ್ ಕನ್ಯಾಯಾಲಾಲ್ ಜೋಶಿ ಮತ್ತು ಪ್ರದೀಪ್ ರಮಣ್ಲಾಲ್ ಮೋಧಿಯಾಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿ ಶಿಕ್ಷೆಯನ್ನು ಅಮಾನತು ಗೊಳಿಸಿರುವುದಕ್ಕೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಕಳವಳ ವ್ಯಕ್ತಪಡಿಸಿದೆ.
ಈ ಹಿಂದೆ ಗುಜರಾತ್ ಸರ್ಕಾರವು ಈ ಎಲ್ಲಾ 11 ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದಾಗ ದೇಶಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತದನಂತರ 2024ರಲ್ಲಿ ಸರ್ವೋಚ್ಚ ನ್ಯಾಯಾಲಯವು ಆ ಕಾನೂನುಬಾಹಿರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಸಂತ್ರಸ್ತೆಗೆ ನ್ಯಾಯದ ಭರವಸೆ ಮೂಡಿಸಿತ್ತು. ಆದರೆ, ಇದೀಗ ಮತ್ತೆ ಅಪರಾಧಿಗಳಿಗೆ ಜಾಮೀನು ನೀಡಿರುವುದು ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರಿಗೆ ಹಾಗೂ ದೇಶದ ನ್ಯಾಯ ವ್ಯವಸ್ಥೆಯನ್ನು ನಂಬಿರುವ ಕೋಟ್ಯಂತರ ನಾಗರಿಕರಿಗೆ ಆಘಾತ ಉಂಟು ಮಾಡಿದೆ.
ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಿಗೆ ನೀಡಲಾಗಿರುವ ಜಾಮೀನನ್ನು ತಕ್ಷಣವೇ ರದ್ದುಗೊಳಿಸ ಬೇಕು. ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಶಿಕ್ಷೆಯಿಂದ ವಿನಾಯಿತಿ ಪಡೆಯಲು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ತಡೆ ಒಡ್ಡಬೇಕು. ಸಂತ್ರಸ್ತೆ ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಹಾಗೂ ಸೂಕ್ತ ನ್ಯಾಯವನ್ನು ಖಾತ್ರಿಪಡಿಸಬೇಕು. ದೇಶದಲ್ಲಿ ಕಾನೂನಿನ ಆಡಳಿತ ಮತ್ತು ಮಹಿಳೆಯರ ಸುರಕ್ಷತೆ ಉಳಿಯಬೇಕಾದರೆ ಇಂತಹ ಘೋರ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗು ವುದು ಅತ್ಯಗತ್ಯ ಎಂದು ಸಾಲಿಡಾರಿಟಿ ಉಡುಪಿ ಅಧ್ಯಕ್ಷ ಅಫ್ವಾನ್ ಬಿ.ಹೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






