ಬಜರಂಗ ದಳ ಮುಖಂಡ ಪುನೀತ್ ಅತ್ತಾವರಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ 3 ತಿಂಗಳು ನಿರ್ಬಂಧ

ಪುನೀತ್ ಅತ್ತಾವರ
ಉಡುಪಿ, ಆ.13: ಇಂದಿನಿಂದ ನವೆಂಬರ್ 13ರವರೆಗೆ ಒಟ್ಟು ಮೂರು ತಿಂಗಳ ಕಾಲ ಮಂಗಳೂರಿನ ಬಜರಂಗ ದಳದ ಮುಖಂಡ ಪುನೀತ್ ಅತ್ತಾವರ (39) ಉಡುಪಿ ಜಿಲ್ಲೆಗೆ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶವನ್ನು ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಂಗಳೂರಿನ ಅತ್ತಾವರ ನಿವಾಸಿ ಪುನೀತ್ ಅತ್ತಾವರ ಉಡುಪಿ ಜಿಲ್ಲಾ ಪ್ರವೇಶವನ್ನು ನಿಷೇಧಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ವಿಎಚ್ಪಿ-ಬಜರಂಗದಳ ಖಂಡನೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಕಾರ್ಯಕ್ರಮ ಗಳಿಗೆ ಆಗಮಿಸಬೇಕಾಗಿದ್ದ ಸಂಘ ಪರಿವಾರದ ಸಂಘಟನೆಗಳ ಮುಖಂಡರಿಗೆ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಉಡುಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿವೆ.
ಪಂಜಿನ ಮೆರವಣಿಗೆ ಕಾರ್ಯಕ್ರಮ ಆಗಮಿಸಬೇಕಾಗಿದ್ದ ಬಜರಂಗ ದಳ ಮುಖಂಡ ಪುನೀತ್ ಅತ್ತಾವರ ಹಾಗೂ ಹಿಂದೂ ಜಾಗರಣ ವೇದಿಕೆಯ ನರಸಿಂಹ ಮಾಣಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರಾಕರಿಸಿರುವುದು ಸರಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆರೋಪಿಸಿದ್ದಾರೆ.






