ಕುಂದಾಪುರದ ಬನ್ಸ್ ರಾಘು ಹತ್ಯೆ ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

ಉಡುಪಿ, ಅ.3: ಕುಂದಾಪುರದ ಉದ್ಯಮಿ ರಾಘವೇಂದ್ರ ಶೇರುಗಾರ ಯಾನೆ ಬನ್ಸ್ ರಾಘು(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಕುಂದಾಪುರ ಠಾಣಾ ಪೊಲೀಸ್ ನಿರೀಕ್ಷಕ ನಂದ ಕುಮಾರ್ ನೇತೃತ್ವದಲ್ಲಿ ಕುಂದಾಪುರ ಎಸ್ಸೈಗಳಾದ ಪ್ರಸಾದ್ ಹಾಗೂ ವಿನಯ ಕುಮಾರ್ ಕೊರ್ಳಹಳ್ಳಿ, ಶಂಕರನಾರಾಯಣ ಎಸ್ಸೈ ಮಧು ಅವರನ್ನೊಳಗೊಂಡ ಮೂರು ತಂಡಗಳನ್ನು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಿವಿಧ ಆಯಾಮ ಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಎಸ್ಪಿ ಡಾ.ಕೆ.ಅರುಣ್, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಚಿಸಲಾದ ಮೂರು ತಂಡಗಳು ಹಲವು ಕಡೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ. ಇಲ್ಲಿರುವ ಸಿಸಿಟಿವಿ ಫುಟೇಜ್ ಮತ್ತು ತಾಂತ್ರಿಕ ಡೇಟಾ ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದರು.
ಆರೋಪಿಗಳ ಬಗ್ಗೆ ಕೆಲವೊಂದು ಸುಳಿವು ಲಭ್ಯವಾಗಿದ್ದು, ಶೀಘ್ರವೇ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಕೆಲವು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗೆ ಕಾರಣ ಏನು ಎಂಬುದನ್ನು ಈ ಹಂತದಲ್ಲಿ ಹೇಳಲು ಆಗುವುದಿಲ್ಲ. ತನಿಖೆ ಮುಗಿದ ಅದರ ಬಗ್ಗೆ ಮಾಹಿತಿ ನೀಡಲಾಗು ವುದು ಎಂದು ಅವರು ತಿಳಿಸಿದರು.
ಕುಂದಾಪುರ ಚಿಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಎದುರುಗಡೆ ಅ.1ರಂದು ರಾತ್ರಿ ಇಬ್ಬರು ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ಶೇರುಗಾರ್ ಅ.2ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







