'ಬ್ಯಾರೀಸ್' ಮಕ್ಕಳನ್ನು ರಾಷ್ಟ್ರದ ಆಸ್ತಿಯಾಗಿ ಬೆಳೆಸುವ ಶಿಕ್ಷಣ ಸಂಸ್ಥೆ: ಡಾ.ಪಿ.ಎಲ್.ಧರ್ಮ
ಕೋಡಿಯಲ್ಲಿ 'ಬ್ಯಾರೀಸ್ ಉತ್ಸವ-2024' ಸಂಸ್ಥಾಪಕರ ದಿನಾಚರಣೆ, ಶಾಲಾ ವಾರ್ಷಿಕೋತ್ಸವ
ಕುಂದಾಪುರ, ನ.30: ಮೌಲ್ಯಯುತ ಶಿಕ್ಷಣ ಪಡೆಯುವ ಮಕ್ಕಳು ಪುಣ್ಯವಂತರು. ಶಿಕ್ಷಣ ದಾನದ ಮೂಲಕ ಶ್ರೇಷ್ಠ ದಾನ ಮಾಡುತ್ತಿರುವ ಸಯ್ಯದ್ ಮುಹಮ್ಮದ್ ಬ್ಯಾರಿ ದೇಶದ ರಕ್ಷಣೆ ಮಾಡುವ ಸೈನಿಕರಾಗಿದ್ದಾರೆ. ಅಣ್ಣ-ತಮ್ಮಂದಿರು ಆಸ್ತಿಗಾಗಿ ಕಲಹ ಮಾಡುವ ಸಂದರ್ಭದಲ್ಲಿ ಬ್ಯಾರಿ ಸಹೋದರರು ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದೂರಗಾಮಿ ಚಿಂತನೆ ಮಾಡುತ್ತಿದ್ದಾರೆ. ಇವರ ಕುಟುಂಬ ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ಪಿ.ಎಲ್.ಧರ್ಮ ಹೇಳಿದ್ದಾರೆ.
ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ 119ನೇ ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ 'ಬ್ಯಾರೀಸ್ ಉತ್ಸವ-2024' ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ, ಬ್ಯಾರೀಸ್ ಎಜ್ಯುಕೇಶನ್‌ನ ನೂತನ ಲೋಗೋ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳನ್ನು ರಾಷ್ಟ್ರದ ಆಸ್ತಿಯಾಗಿ ಬೆಳೆಸಲು ಕಟ್ಟಿದ ಶಿಕ್ಷಣ ಸಂಸ್ಥೆ ಇದಾಗಿದೆ. ಸಯ್ಯದ್ ಬ್ಯಾರಿ ಭಾವುಕ ಜೀವಿ. ಬ್ಯಾರೀಸ್ ಶಿಕ್ಷಣ ಸಂಸ್ಥೆ ಬೆಳೆಯಲು ಶಿಕ್ಷಕರು ಮತ್ತು ಸಿಬ್ಬಂದಿಯ ಕೊಡುಗೆಯೂ ಪ್ರಮುಖವಾಗಿದೆ. ಸಮುದಾಯ, ದೇಶಕ್ಕಾಗಿ ಕೆಲಸ ಮಾಡುವರನ್ನು ಸಯ್ಯದ್ ಬ್ಯಾರಿ ಗುರುತಿಸುತ್ತಾರೆ. ಇಷ್ಟು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡುವುದು ಸಣ್ಣ ಕೆಲಸವಲ್ಲ ಎಂದು ಡಾ.ಪಿ.ಎಲ್.ಧರ್ಮ ಶ್ಲಾಘಿಸಿದ್ದಾರೆ.
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಗೆ ಐಜಿಬಿಸಿ ನೀಡಿದ ಪ್ಲಾಟಿನಮ್ ಪ್ರಶಸ್ತಿಯನ್ನು ಹಸ್ತಾಂತರಿಸಿದ ಐಜಿಬಿಸಿ ಬೆಂಗಳೂರು ವಿಭಾಗದ ಚೆಯರ್ ಮ್ಯಾನ್, ಎಕೋಲಾಜಿಕಲ್ ಎಕನಾಮಿಸ್ಟ್, ಆಲ್ಟ್ ಟೆಕ್ ಫೌಂಡೇಶನ್ ಮತ್ತು ಪ್ರೇಮ್ ಜೈನ್ ಟ್ರಸ್ಟ್, ಹೊಸದಿಲ್ಲಿ ಇವುಗಳ ಟ್ರಸ್ಟಿ ಡಾ.ಚಂದ್ರಶೇಖರ್ ಹರಿಹರನ್ ಮಾತನಾಡಿ, ಬ್ಯಾರೀಸ್ ಸಂಸ್ಥೆಯು ಈ ಪ್ರಶಸ್ತಿ ಪಡೆದಿರುವುದು ತುಂಬಾ ಸಂತೋಷದ ವಿಷಯ. ಇದು ಬಹಳ ದೊಡ್ಡ ಸಾಧನೆಯಾಗಿದೆ. ನಾನು ಇಲ್ಲಿಗೆ ಸಯ್ಯದ್ ಬ್ಯಾರಿ ಅವರಿಗಾಗಿ ಬಂದಿದ್ದೇನೆ. ಅವರ ಮಾತುಗಳು ಹೃದಯವನ್ನು ಮುಟ್ಟುತ್ತವೆ. ಅವರು ಈ ಮಣ್ಣಿನ ಮಗ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ, 1906ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಟ್ರಸ್ಟ್ ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿಯ ಮಾರ್ಗದರ್ಶನದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಪರಿಸರ ಪ್ರೇಮಿಯಾದ ಸಯ್ಯದ್ ಬ್ಯಾರಿ ಅವರು ಪ್ರಾರಂಭಿಸಿದ 'ಸ್ವಚ್ಛ ಕಡಲತೀರ-ಹಸಿರು ಕೋಡಿ' ಅಭಿಯಾನವು ಪ್ರತಿ ತಿಂಗಳ ಕೊನೆಯ ರವಿವಾರ ನಿರಂತರ ನಡೆಯುತ್ತಿದ್ದು ಈವರೆಗೆ 35 ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.
ಸಿಬಿಎಸ್ಇ ಪಠ್ಯಕ್ರಮವನ್ನು ಒಳಗೊಂಡ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನಿರಂತರ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಮೂಡಿಸುವ ಮತ್ತು ಪ್ರತಿಯೊಂದು ಚಟುವಟಿಕೆಯಲ್ಲಿ ಪರಿಸರ ಸ್ನೇಹಿ ನಿಯಮಗಳಿಗೆ ಅನುಗುಣವಾಗಿ ಕಲಿಕೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(ಐಜಿಬಿಸಿ) ಇದರ ಗ್ರೀನ್ ಸ್ಕೂಲ್ ರೇಟಿಂಗ್ ಸಿಸ್ಟಮ್ನಿಂದ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಹಸಿರು ಶಾಲೆಯಾಗಿದೆ ಎಂದು ಅಬ್ದುಲ್ ರಹ್ಮಾನ್ ಬ್ಯಾರಿ ಹೇಳಿದರು.
ಟ್ರಸ್ಟ್ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಮಾತನಾಡಿ, ನಾವು ಮಾಡುವ ಯಾವುದೇ ಕೆಲಸವನ್ನು ಪ್ರೀತಿಸಬೇಕು. ನ್ಯಾಯ ಸಮ್ಮತವಾದ ಕೆಲಸ ಮಾಡಬೇಕು. ನಮ್ಮ ಸಂಸ್ಥೆಯು ಒಂದು ಸಂಸಾರದಂತೆ ಕರ್ತವ್ಯ ನಿರ್ವಹಿಸುತ್ತಿದೆ. ಇಲ್ಲಿ ಸೇವೆ ಎಂಬ ರೀತಿ ಕೆಲಸ ನಡೆಯುತ್ತದೆ. ನಮ್ಮ ವಿದ್ಯಾಸಂಸ್ಥೆಯು ಪರಮಾತ್ಮನ ದಯೆಯಿಂದ ನಡೆಯುತ್ತಿದೆ. ಶ್ರಮವೂ ಕೂಡ ಕಾರ್ಯಸಿದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ಬರಹಗಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಹಾಗು 2024ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ವಿಶ್ವ ಅಗ್ನಿಶಾಮಕ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತರಾದ ಅಶ್ವಿನ್ ಸನಿಲ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶ್ವಿನ್ ಸನೀಲ್ ಮಾತನಾಡಿ, ಇಂದು ಜೀವನದ ಸಂತಸದ ದಿನ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಸ್ವೀಕರಿಸಿದ್ದು ಹೆಮ್ಮೆ ತಂದಿದೆ ಎಂದರು. ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಶಾಲಾ ಜೀವನದಲ್ಲಿ ಪಡೆಯಲಾಗದ ಸನ್ಮಾನ ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದು ಸಂತಸವಾಗಿದೆ. ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಬ್ಯಾರಿ ಅವರ ಕಾರ್ಯನಿಜಕ್ಕೂ ಶ್ಲಾಘನೀಯ ಎಂದರು.
ಟಸ್ಟ್ ನ ವಿಶ್ವಸ್ಥ ಡಾ.ಆಸಿಫ್ ಬ್ಯಾರಿ, ಕುಂದಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಬಿ.ಎಡ್ ಕಾಲೇಜು ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಡೀನ್ ಅಕಾಡಮಿಕ್ಸ್ ಡಾ.ಪೂರ್ಣಿಮಾ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಫಿರ್ದೌಸ್, ಜಯಶೀಲ ಶೆಟ್ಟಿ, ಜಟ್ಟಪ್ಪ, ಸುಮಿತ್ರಾ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿನ ಪ್ರಾಂಶು ಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ.ಸಂದೀಪ್ ಕುಮಾರ್ ಶೆಟ್ಟಿ, ಇಂಗಿಷ್ ಉಪನ್ಯಾಸಕಿ ಪ್ರಿಯಾ ರೇಗೋ ಕಾರ್ಯಕ್ರಮ ನಿರೂಪಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
"ಸಯ್ಯದ್ ಮುಹಮ್ಮದ್ ಬ್ಯಾರಿಯವರ ಬದ್ಧತೆ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಅದೆಲ್ಲವೂ ಅವರ ಹೃದಯದಿಂದ ಬರುತ್ತಿರುವುದು. ಇವರು ತಮ್ಮ ಮನಸ್ಸು ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಕೂಡ ರೂಪಿಸಲು ಕಲಿತಿರುವುದು ನೋಡಿ ಸಂತೋಷವಾಗಿದೆ. ಇವರ ಮನಸ್ಸು ಮಗುವಿನಂತೆ ಇದೆ. ಇವರು ಚಿಕ್ಕಂದಿನಿಂದಲೂ ಮರಗಳನ್ನು ಸಂರಕ್ಷಿಸುವಲ್ಲಿ ಬಹಳಷ್ಟು ಆಸಕ್ತಿ ತೋರಿಸುತ್ತಿದ್ದರು ಎಂದು ಅವರ ಸಹೋದರ ಹೇಳುತ್ತಾರೆ. ಎಲ್ಲಿಯಾದರೂ ಮರ ಕಡಿಯುವುದನ್ನು ನೋಡಿದರೆ ಅವರಿಗೆ ನೋವಾಗುತ್ತದೆ"
-ಡಾ.ಚಂದ್ರಶೇಖರ್ ಹರಿಹರನ್
"ನನ್ನದು ಎಂಬುದಕ್ಕಿಂತ ನಮ್ಮದು ಎಂಬ ಭಾವನೆ ಅಗತ್ಯ. ವಿದ್ಯಾದಾನ, ಮಾನವೀಯತೆ ಬೇಕು. ಅಸತ್ಯ ಬಿಟ್ಟು ಅನ್ಯೋನ್ಯ ಜೀವನ ಮಾಡಬೇಕು. ಬೇರೆಯವರಿಗೆ ಮಾಡುವ ಉಪಕಾರವು ಸಂತುಷ್ಟ ಜೀವನಕ್ಕೆ ದಾರಿಯಾಗುತ್ತದೆ. ಪುಸ್ತಕದ ವಿದ್ಯೆ ಜೊತೆಗೆ ಜೀವನವೆಂಬ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸದೃಢತೆ ಬೆಳೆಸಿಕೊಳ್ಳಬೇಕು"
- ಸಯ್ಯದ್ ಮೊಹಮ್ಮದ್ ಬ್ಯಾರಿ