ಭ್ರಾಮರೀ ನಾಟ್ಯಾಲಯದಿಂದ ಭರತನಾಟ್ಯ ಪ್ರಸ್ತುತಿ

ಸಾಂದರ್ಭಿಕ ಚಿತ್ರ
ಉಡುಪಿ, ಜ.15: ಅಮ್ಮುಂಜೆಯ ಶ್ರೀಭ್ರಾಮರೀ ನಾಟ್ಯಾಲಯ ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೂರು ಜೋಡಿ ಬಾಲಪತ್ರಿಭೆಗಳಿಂದ ಬಾಲ ಯುಗ್ಮ ನೃತ್ಯ ಎಂಬ ಭರತನಾಟ್ಯ ಪ್ರದರ್ಶನವನ್ನು ಪ್ರಸ್ತುತ ಪಡಿಸಲಿ ಎಂದು ಸಂಸ್ಥೆಯ ನಿರ್ದೇಶಕರಾಗಿರುವ ವಿದ್ವಾನ್ ಕೆ.ಭವಾನಿಶಂಕರ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಖ್ಯಾತ ನೃತ್ಯಗುರುಗಳಾದ ನೃತ್ಯ ಕಲಾಸಿಂಧು ನಾಟ್ಯಕಲಾ ಪ್ರವೀಣ ದಿ.ರಾಧಾಕೃಷ್ಣ ತಂತ್ರಿ ಹಾಗೂ ವಿಧುಷಿ ವೀಣಾ ಸಾಮಗರ ಶಿಷ್ಯರಾಗಿರುವ ತಾವು ಎರಡೂವರೆ ದಶಕಗಳಿಂದ ಉಪ್ಪೂರು ಸಮೀಪದ ಕುಗ್ರಾಮವಾಗಿರುವ ಅಮ್ಮುಂಜೆಯಲ್ಲಿ ಕಲಾಸಕ್ತ ಮಕ್ಕಳಿಗಾಗಿ ಭರತನಾಟ್ಯ, ಕೂಚಿಪುಡಿ ಹಾಗೂ ಕರ್ನಾಟಕ ಸಂಗೀತ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.
ಇದೀಗ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ’ಯಡಿ 25 ಕಾರ್ಯಕ್ರಮಗಳನ್ನು ಆಯೋಜಿಸುತಿದ್ದು, ಇದೇ ಜ.26ರಂದು ಕಲ್ಯಾಣಪುರ ಸಂತೆಕಟ್ಟೆಯ ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸಂಜೆ 5 ಕ್ಕೆ ಅರಳು ಪ್ರತಿಭೆಗಳಾದ ಮೂರು ಜೋಡಿಗಳಿಂದ ಬಾಲ ಯುಗ್ಮ ನೃತ್ಯ ಪ್ರದರ್ಶನ ಆಯೋಜಿಸಿದ್ದಾಗಿ ತಿಳಿಸಿದರು.
ನೃತ್ಯ ಕಾರ್ಯಕ್ರಮವನ್ನು ಕೆಮ್ಮಣ್ಣು ಪಡುಕುದ್ರು ಗಣಪತಿ ಮಠದ ಅರ್ಚಕ ನೆಂಪು ಶ್ರೀಧರ ಭಟ್ ಉದ್ಘಾಟಿಸಲಿದ್ದು, ಸಿದ್ಧಕಟ್ಟೆ ನಾಟ್ಯಾಲಯ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಕೆ.ವಿ.ರಮಣಾಚಾರ್ಯ, ಕೆಮ್ಮಣ್ಣಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ಹಾಗೂ ಕಲ್ಯಾಣಪುರ ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.
ಅರಳು ಪತ್ರಿಭೆ ಬಾಲಕಲಾವಿದರಾದ ನಿವೇದಿತಾ ಪೂಜಾರಿ ಮತ್ತು ಹನಿಷ್ಕ ಎನ್.ರಾವ್, ಕ್ಷಿತಿ ಬಿ.ಪೂಜಾರಿ ಮತ್ತು ಸೃಷ್ಟಿ ಅರುಣ್ ಹಾಗೂ ಕಿಯಿರಾ ಸಚಿನ್ ಸುವರ್ಣ ಮತ್ತು ವೈಷ್ಣವಿ ಜೋಡಿ ಇಲ್ಲಿ ನೃತ್ಯ ಪ್ರದರ್ಶನ ನೀಡಲಿ ದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯೋಗೀಶ್ ಎನ್.ಗಾಣಿಗ ಕೊಳಲಗಿರಿ, ಕೆ.ನಂದಕುಮಾರ್ ರಾವ್ ಹಾಗೂ ದೀಪ್ತಿ ಸುವರ್ಣ ಉಪಸ್ಥಿತರಿದ್ದರು.







