Bhatkal | ಮಳೆ–ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು: 200ಕ್ಕೂ ಹೆಚ್ಚು ಮನೆಗಳು ಕತ್ತಲಲ್ಲಿ; ಹೆಸ್ಕಾಂ ವಿರುದ್ಧ ಆಕ್ರೋಶ

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ರಹಮತಾಬಾದ್, ಫಿರ್ದೋಸ್ ನಗರ, ಮೀನಾ ರೋಡ್, ಹನಿಫಾಬಾದ್ ಪ್ರದೇಶದಲ್ಲಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿ–ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಸುಮಾರು 200ಕ್ಕೂ ಹೆಚ್ಚು ಮನೆಗಳು ಕಳೆದ 24 ಗಂಟೆಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಜೆ 7 ಗಂಟೆಯಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಈ ಕುರಿತು ಹೆಸ್ಕಾಂ ಇಲಾಖೆಗೆ ದೂರು ನೀಡಲಾಗಿತ್ತು. ಸ್ಥಳಕ್ಕೆ ಬಂದ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೆರಳಿದ್ದಾರೆಯೇ ಹೊರತು, ದುರಸ್ತಿ ಕಾರ್ಯ ಆರಂಭಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ಇಂದು ರವಿವಾರವಾದ್ದರಿಂದ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ” ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಸೈಯ್ಯದ್ ಅಲಿ ಮಾಲಿಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿರಾಲಿಯ ಚಿತ್ರಾಪುರ ರಸ್ತೆ ಭಾಗದಲ್ಲಿ ಜೆಸಿಬಿ ಮತ್ತು ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಬಳಸಿಕೊಂಡು ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದರೆ ತಮ್ಮ ಪ್ರದೇಶದಲ್ಲಿ ಮಾತ್ರ ಕಾರ್ಮಿಕರ ಕೊರತೆಯ ನೆಪ ಹೇಳಲಾಗುತ್ತಿದೆ ಎಂದು ನಿವಾಸಿಗಳು ಹೆಸ್ಕಾಂ ಇಲಾಖೆಯ ವಿರುದ್ಧ ದೂರಿದ್ದಾರೆ.
ರವಿವಾರ ಸಂಜೆ 50ಕ್ಕೂ ಹೆಚ್ಚು ಮಂದಿ ತಮ್ಮ ಸಮಸ್ಯೆ ಶೀಘ್ರ ಪರಿಹರಿಸಬೇಕೆಂದು ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.






