ಉಡುಪಿ ಡಿಸಿ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ, ಜ.21: ಪರ್ಯಾಯ ಮಹೋತ್ಸವದ ಶೋಭಾಯಾತ್ರೆಗೆ ಉಡುಪಿ ಶ್ರೀಕೃಷ್ಣ ಮಠದ ಯತಿಗಳ ಉಪಸ್ಥಿತಿ ಯಲ್ಲಿ ಭಗವಾಧ್ವಜವನ್ನು ಹಾರಿಸಿ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲು ಮುಂದಾದರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಸದಾ ಹಿಂದೂ ವಿರೋಧಿ ನೀತಿಗಳ ಮೂಲಕ ಮತೀಯ ಶಕ್ತಿಗಳ ಓಲೈಕೆಗಾಗಿ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಇದುವರೆಗೆ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದು, ಇದೀಗ ಪರ್ಯಾಯೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಭಗವಾಧ್ವಜ ಹಾರಿಸಿದ ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಉಡುಪಿ ಜಿಲ್ಲಾಧಿಕಾರಿ ಗಳನ್ನು ಟಾರ್ಗೆಟ್ ಮಾಡುವ ಮೂಲಕ ಮತೀಯ ಶಕ್ತಿಗಳನ್ನು ಖುಷಿ ಪಡಿಸಲು ಮುಂದಾಗಿರುವುದು ದುರಂತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ತೋರಿದ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ. ಕಳೆದ ಹಲವು ದಶಕಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರಕಾರದ ಪ್ರತಿನಿಧಿ ಗಳು ಉಡುಪಿಯ ಪರ್ಯಾಯೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡುವುದು ಸಂಪ್ರದಾಯವಾಗಿತ್ತು ಎಂದು ಹೇಳಿದ್ದಾರೆ.
ಆದರೆ ಉಡುಪಿ ಜಿಲ್ಲೆಗೆ ಅತಿಥಿಯಂತೆ ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿಯ ಪರ್ಯಾಯ ಮಹೋತ್ಸವದ ಬಗ್ಗೆ ಒಂದೇ ಒಂದು ಪೂರ್ವ ಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಅಲ್ಲದೆ ಕರಾವಳಿ ಕರ್ನಾಟಕದ ನಾಡಹಬ್ಬ ಎನಿಸಿರುವ ಉಡುಪಿ ಪರ್ಯಾಯ ಮಹೋತ್ಸವ ಕಾರ್ಯಕ್ರಮದಿಂದ ಅಂತರ ಕಾಯ್ದು ಕೊಂಡು ಉಡುಪಿ ಜಿಲ್ಲೆಯ ಸಮಸ್ತ ಜನತೆಗೆ ಅಪಮಾನ ಮಾಡಿರುವುದಾಗಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ಆಗಮಿಸಿ ಪರ್ಯಾಯದ ಶೋಭಾಯಾತ್ರೆಗೆ ಭಗವಾಧ್ವಜವನ್ನು ಹಾರಿಸಿ ಚಾಲನೆ ನೀಡಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಅವರ ರಾಜೀನಾಮೆಯನ್ನು ಕೇಳುವ ತಾಕತ್ತು ಇದೆಯೇ? ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸುವ ಮೂಲಕ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದರು.







