ಪಡುಬಿದ್ರಿ: ಉಚ್ಚಿಲ ನಾಗರಿಕ ಸಮಿತಿ ವತಿಯಿಂದ ರಕ್ತದಾನ ಶಿಬಿರ

ಪಡುಬಿದ್ರಿ: ಉಚ್ಚಿಲ ನಾಗರಿಕ ಹೋರಾಟ ಸಮಿತಿ ಹಾಗೂ ಬ್ಲಡ್ ಬ್ಯಾಂಕ್ ಕೆ.ಎಂ.ಸಿ. ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಉಚ್ಚಿಲದ ಐಕಾನ್ ಪ್ಲಾಝಾ ಬಳಿ ರವಿವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.
20ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿರುವ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್. ರಕ್ತದಾನ ಮಾಡುವ ಮೂಲಕ ಗಮನಸೆಳೆದರು. ಒಟ್ಟು 59 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಪ್ರತಿಭಾ ಆರ್., "ಭಾರತದಲ್ಲಿ ಇಂದು ರಕ್ತದ ಅವಶ್ಯಕತೆ ಇದೆ. ರಕ್ತದಾನವು ಉಪಕಾರದ ಜೊತೆಗೆ ಸ್ವಂತ ಆರೋಗ್ಯದ ವೃದ್ಧಿಗೂ ಸಹಕಾರಿಯಾಗಿದೆ" ಎಂದರು.
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಕಿಣಿ ಮಾತನಾಡಿ, ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಕಾಡುವ ಡೆಂಗ್ಯೂ, ಮಲೇರಿಯಾ ಜ್ವರದ ಸಮಯದಲ್ಲಿ ರಕ್ತ ಕಣಗಳ ಅವಶ್ಯಕತೆ ಇದೆ. ಆ ಸಮಯದಲ್ಲಿ ಇಂತಹ ರಕ್ತದಾನ ಶಿಬಿರಗಳನ್ನು ನಡೆಸಬೇಕಿದೆ. ಹಲವು ಜೀವಗಳನ್ನು ಉಳಿಸುವ ಕಾರ್ಯ ರಕ್ತದಾನದಿಂದ ಆಗುತ್ತದೆ. ಆ ನಿಟ್ಟಿನಲ್ಲಿ ರಕ್ತದಾನ ಅವಶ್ಯಕವಾಗಿದೆ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷರಾದ ಸಿರಾಜ್ ಎನ್. ಎಚ್. ವಹಿಸಿದ್ದರು.
ಉಚ್ಚಿಲ ರೋಟರಿ ಅಧ್ಯಕ್ಷ ಇಬಾದುಲ್ಲಾ, ಕೆ.ಎಂ.ಸಿ. ಮಣಿಪಾಲದ ವೈದ್ಯ ದೀಪು, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್., ಡಾ. ಗಂಗಾಧರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶೇಖಬ್ಬ, ವೇದವ್ಯಾಸ ಬಂಗೇರ, ಉಚ್ಚಿಲ ನಾಗರಿಕ ಹೋರಾಟ ಸಮಿತಿ ಕಾರ್ಯದರ್ಶಿ ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಿರಾಜ್ ಎನ್.ಎಚ್. ಸ್ವಾಗತಿಸಿದರು. ಝುನೈದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







