ಹೂಡೆ ತೋನ್ಸೆ ಹೆಲ್ತ್ ಸೆಂಟರ್ ಸಂಸ್ಥಾಪಕ ಬಿ.ಎಂ.ಜಾಫರ್ ಗೆ ಡಾ.ಅಬ್ದುಲ್ ಕಲಾಂ ಸದ್ಭಾವನ ಪ್ರಶಸ್ತಿ

ಮಲ್ಪೆ ಮೇ 26: ಕೆಮ್ಮಣ್ಣು ಹೂಡೆಯ ತೋನ್ಸೆ ಹೆಲ್ತ್ ಸೆಂಟರ್ ಸಂಸ್ಥಾಪಕ ಬಿ.ಎಂ.ಜಾಫರ್ ಅವರಿಗೆ ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ವತಿಯಿಂದ ನೀಡಲಾಗುವ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸದ್ಭಾವನ ಪ್ರಶಸ್ತಿ - 2026 ದೊರೆತಿದೆ.
ಸಮಾಜ ಸೇವೆ, ಪರಿಸರ ಸಂರಕ್ಷಣೆ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೇ 30ರಂದು ಹೊಸದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಳೆದ 15 ವರ್ಷಗಳಿಂದ ತೋನ್ಸೆ ಹೆಲ್ತ್ ಸೆಂಟರ್ ಎಂಬ ಆರೋಗ್ಯ ಕೇಂದ್ರವನ್ನು ನಡೆಸುತ್ತಿರುವ ಬಿ.ಎಂ.ಜಾಫರ್, ತಮ್ಮ ಅಜ್ಜ ಬೈಕಾಡಿ ಹಸನ್ ಸಾಹೇಬ್ ಅವರ ಹೆಸರಿನ ಟ್ರಸ್ಟ್ ಮೂಲಕ ಸಮಾಜದ ಎಲ್ಲ ವರ್ಗಗಳ ಬಡ ಜನರಿಗೆ ನೆರವು ನೀಡುವ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಭಿನಂದನೆ
ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸದ್ಭಾವನ ಪ್ರಶಸ್ತಿಗೆ ಆಯ್ಕೆಯಾಗಿರುವ ಹೂಡೆಯ ತೋನ್ಸೆ ಹೆಲ್ತ್ ಸೆಂಟರ್ ಸಂಸ್ಥಾಪಕ ಬಿ.ಎಂ.ಜಾಫರ್ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಭಿನಂದಿಸಿದೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಯುಎಇ ಸದಸ್ಯರೂ ಆಗಿರುವ ಬಿ.ಎಂ.ಜಾಫರ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಸಮಾಜದ ಕಡೆಗಿನ ಅವರ ಸಮರ್ಪಣೆ, ಬದ್ಧತೆ ಮತ್ತು ಪ್ರಾಮಾಣಿಕ ಸೇವೆಗೆ ಸಂದ ನಿಜವಾದ ಗೌರವ ಎಂದು ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಶ್ಲಾಘಿಸಿದ್ದಾರೆ.






