ಪ್ರವಾಸೋದ್ಯಮದ ಮೂಲಕ ಕರಾವಳಿ, ಮಲೆನಾಡು ಆರ್ಥಿಕತೆಗೆ ಉತ್ತೇಜನ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್

ಉಡುಪಿ, ನ.25: ಪ್ರವಾಸೋದ್ಯಮದ ಮೂಲಕ ಕರಾವಳಿ ಮತ್ತು ಮಲೆನಾಡು ಭಾಗದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರತ್ಯೇಕ ವಿಶೇಷ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದ್ದೇವೆ. ಇದರ ಭಾಗವಾಗಿ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅನುಭವ ಕೇಂದ್ರ ಇಡೀ ವಿಶ್ವದ ಪ್ರವಾಸಿಗರನ್ನು ಆರ್ಕಸುವಂತಾಗಬೇಕು. ಇದು ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅಷರ್ದ್ ಹೇಳಿದ್ದಾರೆ.
ಬನ್ನಂಜೆಯಲ್ಲಿರುವ ಡಾ.ವಿ.ಎಸ್.ಆಚಾರ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಿಲ್ದಾಣದಲ್ಲಿ ನೂತನವಾಗಿ ತೆರೆಯಲಾದ ಉಡುಪಿ ಪ್ರವಾಸೋದ್ಯಮ ಅನುಭವ ಕೇಂದ್ರವನ್ನು ಉದ್ಘಾಟಿಸಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ವೆಬ್‌ಸೈಟ್‌ಗೆ ಚಾಲನೆ ನೀಡಿ, ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ ಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿ ನೀಡಲು ಪ್ರವಾಸೋದ್ಯಮ ಅನುಭವ ಕೇಂದ್ರ ವನ್ನು ಸ್ಥಾಪಿಸಲಾಗಿದೆ. ಜಿಲ್ಲೆಗೆ ಭೇಟಿ ನೀಡುವ ದೇಶ-ವಿದೇಶಗಳ ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದೆ. ಈ ಮೂಲಕ ಜಿಲ್ಲೆಯು ಪ್ರವಾಸೋದ್ಯಮದಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂದರು.
ಪ್ರವಾಸೋದ್ಯಮ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಹೊಂದಿದರೆ ಅಧಿಕ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಹೆಚ್ಚು ಜನರಿಗೆ ದೊರೆತರೆ ಕುಟುಂಬಗಳು ಸುಖ ಶಾಂತಿ ನೆಮ್ಮದಿಯ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಲ್ಲಿನ ಯುವಜನರು ಉದ್ಯೋಗವನ್ನರಸಿ ಇತರೆ ಜಿಲ್ಲೆ, ರಾಜ್ಯ ಅಥವಾ ದೇಶಗಳಿಗೆ ಹೋಗುವುದು ತಪ್ಪುತ್ತದೆ ಎಂದರು.
ಪ್ರವಾಸೋದ್ಯಮ ಅನುಭವ ಕೇಂದ್ರದಲ್ಲಿ ಜಿಲ್ಲೆಗೆ ಬರುವ ಎಲ್ಲಾ ಪ್ರವಾಸಿಗ ರಿಗೆ ಸಮಗ್ರ ಮಾರ್ಗದರ್ಶನ ನೀಡ ಬೇಕು. ಅವರುಗಳು ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಡುವ ಒಂದು ಸುಲಭ ತಂತ್ರಜ್ಞಾನ ಬಳಸಿಕೊಂಡು ಮಾಹಿತಿಗಳನ್ನು ಕ್ರೋಢೀಕರಿಸಿ ಜಿಲ್ಲೆಯ ಪ್ರವಾಸಿ ತಾಣಗಳ ಎಲ್ಲ ಮಾಹಿತಿಯು ಒಂದೇ ಕಡೆ ದೊರೆಯುವಂತೆ ತಂತ್ರಜ್ಞಾನ ಆಧಾರಿತ ವೆಬ್‌ಸೈಟ್ ರೂಪಿಸಲಾಗಿದೆ. ಇದನ್ನು ಮೊಬೈಲ್‌ನಲ್ಲಿಯೂ ವೀಕ್ಷಿಸಬಹುದು. ಜೊತೆಗೆ ಕಾಫಿಟೇಬಲ್ ಪುಸ್ತಕವೂ ದೊರೆಯಲಿದೆ. ಇದರಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಕಿಶನ್‌ಕುಮಾರ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.
ಉಡುಪಿ ಪ್ರವಾಸೋದ್ಯಮ ಅನುಭವ ಕೇಂದ್ರದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಸಾರಿಗೆ ಸಂಪರ್ಕ ಮತ್ತು ವಸತಿ ಸೌಲಭ್ಯಗಳ ಮಾಹಿತಿ ಲಭ್ಯವಾಗಲಿದ್ದು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಆಯ್ದ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುವುದು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಕಾಫಿ ಟೇಬಲ್ ಪುಸ್ತಕದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ಸೌಂದರ್ಯ ಹಾಗೂ ಸ್ಥಳೀಯ ಕಲೆಯನ್ನು ಉತ್ತಮ ಗುಣಮಟ್ಟದ ಛಾಯಾಚಿತ್ರಗಳು ಮತ್ತು ಮಾಹಿತಿಯೊಂದಿಗೆ ಈ ಪುಸ್ತಕ ಪರಿಚಯಿಸಲಿದೆ.






