ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಮರ ಸಾಗಾಟ ಪ್ರಕರಣ: ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಶಂಕರ್ ವರ್ಗ

ಉಡುಪಿ: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಹಾಗೂ ಸಹ ಪ್ರಾಧ್ಯಾಪಕ (ಕೃಷಿ ಇಂಜಿನಿಯರಿಂಗ್) ಡಾ.ಶಂಕರ್ ಎಂ. ಇವರನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದಲ್ಲಿದ್ದ ಅಮೂಲ್ಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯೂರಿ ನಲ್ಲಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಸಹ ಪ್ರಾಧ್ಯಾಪಕರ (ಕೃಷಿ ಇಂಜಿನಿಯರಿಂಗ್) ಹುದ್ದೆಗೆ ವರ್ಗಾವಣೆಗೊಳಿಸಿ ರುವುದಾಗಿ ವಿವಿ ಆದೇಶದಲ್ಲಿ ತಿಳಿಸಲಾಗಿದೆ.
ಕೃಷಿ ಕೇಂದ್ರದಿಂದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದು, ಡಾ.ಶಂಕರ್ ವಿರುದ್ಧ ಆರೋಪ ಕೇಳಿಬಂದು ಇತ್ತೀಚೆಗೆ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಅವರು ಸ್ಥಳಕ್ಕೆ ಬಂದು ಈ ಬಗ್ಗೆ ಧ್ವನಿ ಎತ್ತಿದ್ದು ಪ್ರಕರಣ ವಿವಾದದ ರೂಪ ತಳೆದಿತ್ತು. ಇದೀಗ ಡಾ.ಶಂಕರ್‌ರನ್ನು ಡಿ.3ರಂದೇ ಹುದ್ದೆಯಿಂದ ಕಡ್ಡಾಯವಾಗಿ ಬಿಡುಗಡೆ ಗೊಳಿಸುವಂತೆ ವಿವಿಯ ಆಡಳಿತಾಧಿಕಾರಿಗಳು ನೀಡಿದ ಆದೇಶದಲ್ಲಿ ತಿಳಿಸಲಾಗಿತ್ತು.
ಬ್ರಹ್ಮಾವರ ಕೃಷಿ ಕೇಂದ್ರಕ್ಕೆ ಸೇರಿದ ನೂರಾರು ಎಕರೆ ಪ್ರದೇಶವಿದ್ದು, ಇಲ್ಲಿಂದ ಲಕ್ಷಾಂತರ ರೂ. ಮೌಲ್ಯದ ಮರಗಳ ಸಾಗಾಟ ನಡೆದಿರುವುದಾಗಿ ಆರೋಪ ಕೇಳಿಬಂದಿತ್ತು. ಮರಗಳ ಅನುಪಯುಕ್ತ ಗೆಲ್ಲುಗಳನ್ನು ಕಡಿಯುವ ಟೆಂಡರ್ ಕರೆದು ಬೆಲೆಬಾಳುವ ಅಕೇಷಿಯಾ ಮರಗಳನ್ನು ಸಾಗಿಸಿ ಅವ್ಯವಹಾರ ನಡೆಸಿರುವುದಾಗಿ ದೂರು ಕೇಳಿಬಂದಿತ್ತು.
ಗಂಭೀರ ಆರೋಪ ಬಂದಾಗ ಶಾಸಕ ಯಶ್ಪಾಲ್ ಸುವರ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.







