ಬ್ರಹ್ಮಾವರ: ಗ್ರಾಪಂಗಳ ಎದುರು ಕಾಂಗ್ರೆಸ್‌ನಿಂದ ಸತ್ಯದರ್ಶನ ಪ್ರತಿಭಟನೆ

ಬ್ರಹ್ಮಾವರ, ಜು.22: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹದ ಭಾಗವಾಗಿ ವಾರಂಬಳ್ಳಿ, ಹಂದಾಡಿ, ಚಾಂತಾರು, ಹಾರಾಡಿ ಗ್ರಾಮ ಪಂಚಾಯತ್ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಚಾಂತಾರು ಗ್ರಾಪಂ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ರಾಜ್ಯ ಕಾಂಗ್ರೆಸ್ ಸರಕಾರ ಜನಪರವಾದ ಆಡಳಿತವನ್ನು ನೀಡು ತ್ತಿದೆ. ಆದರೆ ಬಿಜೆಪಿ ಕಾಂಗ್ರೆಸ್ ಸರಕಾರದ ಬಗ್ಗೆ ಅಪಪ್ರಚಾರ ಮಾಡುತ್ತ್ತ, ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಬಿಜೆಪಿ ಸುಳ್ಳು ಹೇಳಿಕೊಂಡು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ದೂರಿದರು.
ಜನರ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಬೇಕಾಗಿದ್ದ ಶಾಸಕ ಯಶ್‌ಪಾಲ್ ಸುವರ್ಣ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಕೊಂಡು, ಜಿಲ್ಲೆಯ ಹೆಸರನ್ನು ಮೂರು ಕಾಸಿಗೆ ಹರಾಜು ಹಾಕುತ್ತಿ ದ್ದಾರೆ. ಶಾಸಕರು ತಮ್ಮ ನಡುವಳಿಕೆಯನ್ನು ಸರಿಮಾಡಿಕೊಂಡು ಜನರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆ, ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ. ಆ ಮೂಲಕ ಶಾಸಕ ನೈಜ ಸ್ಥಿತಿಯನ್ನು ಜನರಿಗೆ ತೋರಿಸಿಕೊಡಲಾಗುವುದು ಎಂದು ಅವರು ಆರೋಪಿಸಿದರು.
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರಾಜ್ಯ ಸರಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಬಿಜೆಪಿಯವರು ಅಭಿವೃದ್ಧಿ ಆಗುತ್ತಿಲ್ಲ ಎನ್ನುತ್ತಾರೆ. ಬಿಜೆಪಿ ಸುಳ್ಳು ಹೇಳಿಕೊಂಡು ಬರುವ ಕಡೆ ನಾವು ಸತ್ಯ ತಿಳಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ರಾದ ಪ್ರಖ್ಯಾತ್ ಶೆಟ್ಟಿ, ಅಮೃತ ಶೆಣೈ, ಕೀರ್ತಿ ಶೆಟ್ಟಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಬು ಪೂಜಾರಿ, ಬ್ಲಾಕ್ ಅಧ್ಯಕ್ಷರು ರಾಘವೇಂದ್ರ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಭುಜಂಗ ಶೆಟ್ಟಿ, ಗೋಪಿ ಕೆ.ನಾಯ್ಕ್, ಮೈರ್ಮಾಡಿ ಸುಧಾಕರ್ ಶೆಟ್ಟಿ, ಮುಖಂಡರಾದ ಪ್ರಶಾಂತ್ ಸುವರ್ಣ, ಮಹೇಶ್ ಮೊಯಿಲಿ, ನವೀನ್ ಬಂಗೇರ ಉದಯ್ ಆಚಾರ್ಯ, ಭುವನೇಶ್ ಕರ್ಜೆ, ಹರೀಶ್ ಶೆಟ್ಟಿ ಕರ್ಜೆ, ಕುಮಾರ್ ಸುವರ್ಣ, ಸೂರ್ಯ ಸಾಲಿಯಾನ್ ಉಪಸ್ಥಿತರಿದ್ದರು.







