ಬ್ರಹ್ಮಾವರ| ರೌಡಿಶೀಟರ್ ಸುಜಿತ್ ಪಿಂಟೊ ಹತ್ಯೆ ಪ್ರಕರಣ: ಆರೋಪಿ ಸಹೋದರರಿಬ್ಬರ ಬಂಧನ
ಹಣಕಾಸಿನ ವಿಚಾರಕ್ಕೆ ಕೃತ್ಯದ ಶಂಕೆ

ಸುಜಿತ್ ಪಿಂಟೊ - ಪ್ರಮೋದ್ - ಪ್ರದೀಪ್
ಬ್ರಹ್ಮಾವರ, ಅ.28: ಹಣಕಾಸಿನ ವಿಚಾರವಾಗಿ ರೌಡಿಶೀಟರ್ ಸುಜಿತ್ ಪಿಂಟೊ (43)ನನ್ನು ಸಹೋದರರಿಬ್ಬರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅ.27ರಂದು ರಾತ್ರಿ 8.30ರ ಸುಮಾರಿಗೆ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ನಡೆದಿದೆ.
ಬೈಕಾಡಿ ಗ್ರಾಮದ ಪಡುಬೈಕಾಡಿಯ ಪ್ರಮೋದ್ ಪೂಜಾರಿ(39) ಹಾಗೂ ಆತನ ಅಣ್ಣ ಪ್ರದೀಪ್ ಪೂಜಾರಿ(45) ಬಂಧಿತ ಆರೋಪಿಗಳು. ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೊ ಕಳೆದ ಒಂದು ವರ್ಷಗಳಿಂದ ಬೈಕಾಡಿಯಲ್ಲಿ ವಾಸ ಮಾಡುತ್ತಿದ್ದನು. ಪ್ರಮೋದ್ ಮತ್ತು ಪ್ರದೀಪ್, ಭದ್ರಗಿರಿಯ ಜೀವನ್ ಪೂಜಾರಿ ಮತ್ತು ಸುಜಿತ್ ಪಿಂಟೊ ಅವರನ್ನು ಭದ್ರಗಿರಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು.
ಸಹೋದರರಿಬ್ಬರು ಸ್ಕೂಟರ್ನಲ್ಲಿ ಬಂದಿದ್ದರೆ, ಸುಜಿತ್ ಮತ್ತು ಜೀವನ್ ಕಾರಿನಲ್ಲಿ ಬಂದಿದ್ದರು. ಹೀಗೆ ಅಲ್ಲಿ ಇವರ ಮಧ್ಯೆ ವೈಯಕ್ತಿಕ ವಿಚಾರದಲ್ಲಿ ಪರಸ್ಪರ ಮಾತಿಗೆ ಮಾತು ಬೆಳೆದು, ಗಲಾಟೆ ನಡೆಯಿತು. ಇವರು ಕೈಯಿಂದ ಹೊಡೆದುಕೊಳ್ಳುವ ವೇಳೆ ಪ್ರದೀಪ್ ಪೂಜಾರಿ ಸುಜಿತ್ ಪಿಂಟೊನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆಗ ಪ್ರಮೋದ ಪೂಜಾರಿ ತನ್ನಲ್ಲಿದ್ದ ಸ್ಟೀಲ್ ಪೈಪ್ನಿಂದ ಸುಜಿತ್ ಪಿಂಟೊ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಜೀವನ್ ಪೂಜಾರಿಗೂ ಇವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮೋದ್ ಪೂಜಾರಿ ತಕ್ಷಣ ಪೊಲೀಸರಿಗೆ ಶರಣಾಗಿದ್ದು, ಪ್ರದೀಪ್ ಪೂಜಾರಿ ಪರಾರಿಯಾಗಿದ್ದನು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆತನನ್ನು ಕೂಡ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಜೀವನ ಪೂಜಾರಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ, ನಾರ್ಕೋ ತಂಡ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಮೂರು ಕೊಲೆ ಪ್ರಕರಣಗಳ ಆರೋಪಿ
ಮೃತ ಸುಜಿತ್ ಪಿಂಟೊ ಮಲ್ಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತ ವಿರುದ್ಧ ಉಡುಪಿ ನಗರ ಠಾಣೆ, ಮಲ್ಪೆ ಠಾಣೆ, ಹಿರಿಯಡ್ಕ ಠಾಣೆ ಹಾಗೂ ಮಣಿಪಾಲ ಠಾಣಾಗಳಲ್ಲಿ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
2016ರ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯಡ್ಕ ಕೋತ್ನಕಟ್ಟೆ ಎಂಬಲ್ಲಿ ಡಿ.19ರಂದು ನಡೆದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ, 2018ರ ಜು.29ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ರಸ್ತೆಯ ಇಸ್ಪೀಟ್ ಕ್ಲಬ್ನ ಮಾಲಕ ಗುರುಪ್ರಸಾದ್ ಭಟ್ ಕೊಲೆ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮೀನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿ ಸುಜಿತ್ ಪಿಂಟೊ ಆರೋಪಿಯಾಗಿದ್ದನು. ಇದರಲ್ಲಿ ಆತ ಒಂದು ಪ್ರಕರಣದಲ್ಲಿ ಖುಲಾಸೆ ಆಗಿದ್ದು, ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಆರೋಪಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ವಿರುದ್ಧ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲದೇ ಇದ್ದು, ಇವರಲ್ಲಿ ಪ್ರದೀಪ್ ಪೂಜಾರಿ ರಿಕ್ಷಾ ಚಾಲಕನಾಗಿ ಮತ್ತು ಪ್ರಮೋದ್ ಪೂಜಾರಿ ಗಾರೆ ಕೆಲಸ ಮಾಡುತ್ತಿದ್ದನು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
‘ಮೃತ ಸುಜಿತ್ ಪಿಂಟೊ ಮೂರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಆ ಪ್ರಕರಣಗಳ ಸಂತ್ರಸ್ತರ ಕಡೆಯವರು, ಅಥವಾ ಬೇರೆ ಯಾರಾದರೂ ಈ ಇಬ್ಬರು ಆರೋಪಿಗಳನ್ನು ಬಳಸಿಕೊಂಡು ಧ್ವೇಷ ಸಾಧಿಸಲು ಪ್ರತಿ ದಾಳಿ ಮಾಡಿರಬಹುದೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯದ ತನಿಖೆಯಲ್ಲಿ ಅಂತಹ ಯಾವುದೇ ವಿಚಾರ ತಿಳಿದುಬಂದಿಲ್ಲ. ಇವರ ಮಧ್ಯೆ ಯಾವುದೋ ಹಣಕಾಸು ಹಾಗೂ ವೈಯಕ್ತಿಕ ವಿಚಾರದಲ್ಲಿ ಈ ಕೃತ್ಯ ಎಸಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ’
-ಹರಿರಾಂ ಶಂಕರ್, ಎಸ್ಪಿ ಉಡುಪಿ






