ಕೃಷಿಯಲ್ಲಿ ಮಿಶ್ರ ಬೆಳೆಯಿಂದ ಸ್ವಾವಲಂಬಿಯಾಗಲು ಸಾಧ್ಯ: ಮಂಜುನಾಥ ಭಂಡಾರಿ

ಬ್ರಹ್ಮಾವರ: ಇಂದು ರೈತ ದುಡ್ಡಿನ ಆಸೆಗೋಸ್ಕರ ತನ್ನ ಜಮೀನನ್ನು ಮಾರಾಟ ಮಾಡಿ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದಾನೆ. ಆದುದರಿಂದ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿ ಸ್ವಂತ ಕಾಲಿನಲ್ಲಿ ನಿಲ್ಲುವ ಪ್ರಯತ್ನ ಮಾಡುವತ್ತ ಯುವಜನತೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕೃಷಿ ಮೇಳದಲ್ಲಿ ರವಿವಾರ ವಿಚಾರಗೋಷ್ಟಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜೀವನದಲ್ಲಿ ಸಮಾಧಾನದ ಕೇತ್ರ ಅಂದರೆ ಕೃಷಿ. ಒತ್ತಡದ ಜೀವನದಲ್ಲಿ ಸ್ವಲ್ಪ ಸಮಯ ಕೃಷಿ, ತೋಟಗಾರಿಕೆಗೆ ನೀಡಬೇಕು. ನಮ್ಮ ಮಣ್ಣನ್ನು ಮುಟ್ಟಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ನಮ್ಮ ಒತ್ತಡ, ಕಷ್ಟ ಎಲ್ಲವನ್ನು ಮರೆಯುತ್ತೇವೆ ಎಂದರು.
ರಾಜ್ಯದ ವಿಶ್ವವಿದ್ಯಾನಿಲಯಗಳು ಎಕರೆಗಟ್ಟಲೆ ಜಮೀನು ಹೊಂದಿವೆ. ಸರಕಾರದ ಯಾವುದೇ ಅನುದಾನ ಪಡೆಯದೇ, ತಮ್ಮ ಜಮೀನಿನಲ್ಲಿಯೇ ಇಚ್ಛಾಶಕ್ತಿ ಬೆಳೆಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಸಿ ಆರ್ಥಿಕ ಸ್ಥಿತಿ ಸದೃಢಗೊಳಿಸಿಕೊಂಡು ಸ್ವಾವಲಂಬಿಯಾಗಿ ವಿಶ್ವವಿದ್ಯಾನಿಲಯ ನಡೆಯು ವಂತಾಗಬೇಕು. ಮಾದರಿ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಬೇಕು ಎಂದು ಅವರು ಸಲಹೆ ನೀಡಿದರು.
ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ ಸುಧೀರ ಕಾಮತ್ ಸ್ವಾಗತಿಸಿದರು. ಕೆ.ವಿ.ಕೆ. ಮುಖ್ಯಸ್ಥ ಡಾ.ಧನಂಜಯ ಬಿ. ವಂದಿಸಿದರು.
ನಂತರ ನಡೆದ ಗೇರು ಬೆಳೆ ಮತು ಕರಾವಳಿಗೆ ಭವಿಷ್ಯದ ಬೆಳೆಗಳು ಮತ್ತು ತಾಂತ್ರಿಕತೆಗಳು ವಿಚಾರಗೋಷ್ಟಿಯಲ್ಲಿ ಕಾರ್ಕಳ ಶಿರ್ಲಾಲಿನ ಪ್ರಗತಿಪರ ಕೃಷಿಕ ಗುಣಪಾಲ ಕಡಂಬ, ದ.ಕ ಜಿಲ್ಲೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಿ.ಮಂಜುನಾಥ, ಕುದಿ ಗ್ರಾಮದ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ ಶೆಟ್ಟಿ ಉಪಸ್ಥಿತರಿದ್ದರು.







