ಬ್ರಾಹ್ಮಣ್ಯ ಅಧಿಕಾರಶಾಹಿ ಆರೆಸ್ಸೆಸ್ ದೇಶದಿಂದ ತೊಲಗಲಿ: ಪ್ರೊ.ಫಣಿರಾಜ್

ಉಡುಪಿ, ನ.11: ಜಾತಿವ್ಯವಸ್ಥೆಯನ್ನು ಸಧೃಢವಾಗಿರಿಸುವ ಬ್ರಾಹ್ಮಣ್ಯ ಅಧಿಕಾರಶಾಹಿ ಜೊತೆಗೆ ಬಂಡವಾಶಾಹಿ ಜೊತೆ ಕೈಜೋಡಿಸಿ ಏಕಚಕ್ರಾಧಿ ಪತ್ಯದ ಅಧಿಕಾರ ಮತ್ತು ದಲಿತರನ್ನು ಯಾಮಾರಿಸಿ ತಮ್ಮ ಅಡಿಯಾಳುಗಳಾಗಿ ಮಾಡುವ ಆರೆಸ್ಸೆಸ್ ಸಂಘಟನೆ ಈ ದೇಶದಿಂದ ತೊಲಗಬೇಕು. ಫ್ಯಾಶಿಸ್ಟ್, ಜಾತಿವಾದಿ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಮಾನತೆ ವಿರೋಧಿಯಾಗಿರುವ ಈ ಸಂಘಟನೆ ವಿರುದ್ಧ ಹೋರಾಟ ಮುಂದುವರೆಸಬೇಕು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕಲಹ ಸೃಷ್ಠಿಸಿ ಬೆಂಕಿ ಹಚ್ಚುವ ಮತ್ತು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಆರೆಸ್ಸೆಸ್ ವಿರುದ್ಧ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹಿಂದುಗಳ ಹೆಸರಿನಲ್ಲಿ ದಲಿತರನ್ನು ಯಾಮಾರಿಸಿ ಜಾತಿವ್ಯವಸ್ಥೆ ಮತ್ತು ವೈದಿಕಶಾಹಿ ಬ್ರಾಹ್ಮಣ ವ್ಯವಸ್ಥೆಯನ್ನು ಖಾಯಂ ಇಡುವ ಒಂದೇ ಉದ್ದೇಶದಿಂದ ಆರೆಸ್ಸೆಸ್ ಸ್ಥಾಪಿಸಲಾಗಿತ್ತು. ಅವರಿಗೆ ಶೂದ್ರರು ಮತ್ತು ಕೆಳಜಾತಿಯವರು ಅಡಿಯಾಳುಗಳಾಗಿ ಮತ್ತು ಬ್ರಾಹ್ಮಣರ ಅಧಿಕಾರ ಶಾಹಿ, ಸಾಮಾಜಿಕ ಅಧಿಕಾರ ಬೇಕಾಗಿದೆ ಎಂದು ಅವರು ತಿಳಿಸಿದರು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಸಮಾನತೆ, ಮೀಸಲಾತಿ, ಮಹಿಳೆಯರ ಸಮಾನತೆ ಹಕ್ಕುಗಳಿಗೆ ಆರೆಸ್ಸೆಸ್ ಸಂಪೂರ್ಣ ವಿರುದ್ಧವಾಗಿದ್ದು, ಈ ದೇಶದ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಒಪ್ಪುವುದಿಲ್ಲ. ಒಡೆದು ಆಳುವ ನೀತಿಯ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಅಪಪ್ರಚಾರ ಮಾಡಿ ಇಡೀ ಸಮಾಜವನ್ನು ಮತೀಯವಾಗಿ ಇಬ್ಭಾಗ ಮಾಡಿ ರಾಜಕೀಯ ಅಧಿಕಾರ ಪಡೆದಿದ್ದಾರೆ ಎಂದು ಆರೋಪಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ನೋಂದಾಣಿಯಾಗದ ಆರೆಸ್ಸೆಸ್ ಸಂಘಟನೆಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರ್ಯಚಟುವಟಿಕೆ ನಡೆಸಲು ಅವಕಾಶ ನೀಡಬಾರದು. ಅವರಿಗೆ ಲಾಠಿ ಹಿಡಿದು ಮೆರವಣಿಗೆ ನಡೆಸಲು ಅನುಮತಿ ನೀಡಿದರೆ, ನಾವು ಕೂಡ ಮೆರವಣಿಗೆ ಮಾಡುತ್ತೇವೆ. ನಮಗೂ ಅವಕಾಶ ನೀಡಬೇಕು ಎಂದು ಎಚ್ಚರಿಕೆ ನೀಡಿದರು.
ಬಳಿಕ ಈ ಕುರಿತ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮುಖಂಡರಾದ ರಾಜೇಂದ್ರ ನಾಥ್, ಶ್ಯಾಮ್ ಸುಂದರ್ ತೆಕ್ಕಟ್ಟೆ, ರಾಘವ, ಇದ್ರೀಸ್ ಹೂಡೆ, ಅನ್ವರ್ ಅಲಿ ಕಾಪು ಮೊದಲಾದವರು ಉಪಸ್ಥಿತರಿದ್ದರು.
‘ಸಾಮರಸ್ಯ ಕೆಡಿಸಿರುವುದೇ ಆರೆಸ್ಸೆಸ್ 100ವರ್ಷಗಳ ಸಾಧನೆ’
ಸಮಾಜದ ಶಾಂತಿ ಸಾಮಾರಸ್ಯ ಕೆಡಿಸಿರುವುದೇ ಆರೆಸ್ಸೆಸ್‌ನ 100ವರ್ಷಗಳ ಸಾಧನೆಯಾಗಿದೆ. ಈ ದೇಶದಲ್ಲಿರುವ ಮೂಢನಂಬಿಕೆ, ಜಾತಿ ಸಮಸ್ಯೆ, ಅತ್ಯಾಚಾರದ ಬಗ್ಗೆ ಚಕಾರ ಎತ್ತದ ಆರೆಸ್ಸೆಸ್, ಕೇವಲ ಹಿಂದು ಮುಸ್ಲಿಮ್ ಧ್ವೇಷದ ಮನೋಭಾವನೆಯನ್ನು ಸಮಾಜದಲ್ಲಿ ಬಿತ್ತಿ ರಾಜಕೀಯ ಅಧಿಕಾರವನ್ನು ಭದ್ರವಾಗಿ ಇಟ್ಟಿಕೊಳ್ಳುವ ವ್ಯವಸ್ತಿತ ಹುನ್ನಾರ ನಡೆಸಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಆರೋಪಿಸಿದರು.
ಸಂವಿಧಾನ ವಿರೋಧಿಯಾಗಿರುವ ಆರೆಸ್ಸೆಸ್‌ನ ಹುನ್ನಾರವನ್ನು ನಾವು ಮುಂದಿನ ಪೀಳಿಗೆಗೂ ಅರ್ಥ ಮಾಡಿಸಿಕೊಡಬೇಕಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಒಪ್ಪದ ಆರೆಸ್ಸೆಸ್ ದೇಶದ್ರೋಹಿ ಸಂಘಟನೆಯಾಗಿದ್ದು, ಇದರ ಕಾರ್ಯಚಟುವಟಿಕೆಗಳು ದೇಶದ ಅಭಿವೃದ್ಧಿ ಮತ್ತು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ. ಆದುದರಿಂದ ಆ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಅವರು ಆಗ್ರಹಿಸಿದರು.







