ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕ್ಕೆ ಸಹೋದರನ ಆಗ್ರಹ

ಆಲ್ವಿನ್ ಪ್ರಕಾಶ್ ಕುಂದರ್ - ಅನಿಲ್ ಪ್ರಶಾಂತ್ ಕುಂದರ್
ಉಡುಪಿ, ಸೆ.22: ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ.
ಪ್ರಕಾಶ್ ಕುಂದರ್ ಅವರು 14 ವರ್ಷಗಳಿಂದ ಶಾರ್ಜಾದ ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದು 20 ವರ್ಷಗಳ ಹಿಂದೆ ಉಡುಪಿ ಉದ್ಯಾವರ ಬಲಾಯಿಪಾದೆಯ ಟೀನಾ ಕುಂದರ್ ಎಂಬಾಕೆಯನ್ನು ಮದುವೆಯಾಗಿದ್ದರು.
ಪ್ರಸ್ತುತ ಅವರಿಗೆ ಓರ್ವ ಮಗ ಇದ್ದಾನೆ. ಆತ ಶಾರ್ಜಾದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದನು. ಟೀನಾ ಅಲ್ಲಿಯೇ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಕಾಶ್ ಕುಂದರ್ ಊರಿಗೆ ಬಂದು ಮತ್ತೆ ಶಾರ್ಜಾಕ್ಕೆ ತೆರೆಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಸಹೋದರನಿಂದ ಎಸ್ಪಿಗೆ ಮನವಿ: ಮೃತರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜು.20ರಂದು ನಾನು ಪ್ರಕಾಶ್ಗೆ ಕರೆ ಮಾಡಿದ್ದು, ಆದರೆ ಆತ ಕರೆಯನ್ನು ಸ್ವೀಕರಿಸಿರಲಿಲ್ಲ. ಅದರ ಬದಲು ಆತ ನನಗೆ ಟೈಪಿಂಗ್ ಮೆಸೇಜ್ ಕಳುಹಿಸಿ ನಾನು ಸೌಖ್ಯ ಇದ್ದೇನೆ ಎಂದು ಹೇಳಿದ್ದನು. ಅವ ಯಾವತ್ತಿಗೂ ಈ ರೀತಿ ಟೈಪಿಂಗ್ ಮೆಸೇಜ್ ಕಳುಹಿಸುವುದಿಲ್ಲ. ಒಂದು ವಾರ ಬಿಟ್ಟು ಮತ್ತೆ ಕರೆ ಮಾಡಿದಾಗಲೂ ಸ್ವೀಕರಿಸಲಿಲ್ಲ ಎಂದು ತಿಳಿಸಿದರು.
ಇದರಿಂದ ಸಂಶಯ ಮೂಡಿ ಅಲ್ಲೇ ಇರುವ ಪ್ರಕಾಶ್ನ ಕ್ಲಾಸ್ಮೇಟ್ ಮನೋಹರ್ಗೆ ಕರೆ ಮಾಡಿ ಮಾಹಿತಿ ನೀಡಿದೆ. ಆತ ಪ್ರಕಾಶ್ಗೆ ಕಂಪೆನಿಗೆ ನೀಡಿದ ಫ್ಲ್ಯಾಟ್ಗೆ ಹೋಗಿ ವಿಚಾರಿಸಿದನು. ಆಗ ಅಲ್ಲಿನ ವಾಚ್ಮೆನ್ ಅವರು ಭಾರತಕ್ಕೆ ಹೋಗಿದ್ದಾರೆ ಎಂದು ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ ನಾನೇ ಸ್ವತಃ ಪ್ರಕಾಶ್ ಕಂಪೆನಿಯ ಎಚ್ಆರ್ಗೆ ಕರೆ ಮಾಡಿದೆ. ಅವರು ಕೂಡ ಅವರ ಭಾರತಕ್ಕೆ ಹೋಗಿದ್ದರು ಎಂದು ತಿಳಿಸಿದರು.
ಅದಕ್ಕೆ ನಾನು ಮರುದಿನ ಕರೆ ಮಾಡಿ, ಅವರು ಭಾರತಕ್ಕೆ ಬಂದಿಲ್ಲ, ಅಲ್ಲಿಯೇ ಇದ್ದಾರೆ. ಪರಿಶೀಲಿಸುವಂತೆ ಮನವಿ ಮಾಡಿದೆ. ಆಗ ಅವರು ಪಾಸ್ಪೋರ್ಟ್ ಚೆಕ್ ಮಾಡುವಾಗ ಪ್ರಕಾಶ್ ಶಾರ್ಜಾದಲ್ಲಿಯೇ ಇರುವುದು ಕಂಡುಬಂದಿದೆ. ಅದರಂತೆ ಇಲ್ಲಿಂದ ಆತ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದೆ. ಬಳಿಕ ತನಿಖೆ ಮಾಡಿದಾಗ ಒಮನ್ಗೆ ಹೋಗುವ ಮಾರ್ಗದ ಬದಿ ಕಾರಿನಲ್ಲಿ ಒಂಭತ್ತು ತುಂಡುಗಳಾಗಿ ಎರಡು ಬ್ಯಾಗ್ನಲ್ಲಿ ತುಂಬಿಸಿಟ್ಟ ಮೃತದೇಹ ಪತ್ತೆಯಾಯಿತು. ಬಳಿಕ ಪರಿಶೀಲಿಸಿದಾಗ ಈ ಮೃತದೇಹ ಪ್ರಕಾಶ್ ಅವರದ್ದೇ ಎಂಬುದು ದೃಢಪಟ್ಟಿತು. ಈ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿ ನಿನ್ನೆಯಷ್ಟೇ ನಮ್ಮ ಕೈಸೇರಿದೆ ಎಂದು ಅವರು ತಿಳಿಸಿದರು.
ಪ್ರಕಾಶ್ ಪತ್ನಿ ಮತ್ತು ಮಗ ಈಗ ಶಾರ್ಜಾದಲ್ಲಿ ಇಲ್ಲ. ಆಕೆ ಭಾರತಕ್ಕೆ ಬಂದಿದ್ದಾರೆ ಎಂದು ಹೇಳುತ್ತಾರೆ. ಆದರೆ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಎಸ್ಪಿಗೆ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಸಮಗ್ರ ತನಿಖೆ ಆಗಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಉಡುಪಿ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಹತ್ಯೆಯಾಗಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿದೆ. ಆದರೆ ಈ ಘಟನೆಗೆ ಸಂಬಂಧಿಸಿ ಈವರೆಗೆ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿರುವುದಿಲ್ಲ’
-ಹರಿರಾಂ ಶಂಕರ್, ಉಡುಪಿ ಎಸ್ಪಿ






