ಬೈಂದೂರು: ಬಿಜೆಪಿಯಿಂದ ದೀಪಕ್ ಕುಮಾರ್ ಶೆಟ್ಟಿ ಉಚ್ಛಾಟನೆ

ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಇಲ್ಲಿನ ಬಿಜೆಪಿ ಮಂಡಲದ ನಿಕಟ ಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ನೋಟಿಸ್ ಕಳುಹಿಸಿದ್ದಾರೆ.
ಪತ್ರದಲ್ಲೇನಿದೆ?: ಪಕ್ಷದ ಜಿಲ್ಲಾ ಮುಖಂಡರ ಸ್ಪಷ್ಟ ಹಾಗೂ ಪುನಃ ಪುನಃ ನೀಡಲಾದ ಸೂಚನೆಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿ, ಪಕ್ಷದ ಅಧಿಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತು ಹಾಗೂ ಏಕತೆಯನ್ನು ಗಂಭೀರವಾಗಿ ಹಾನಿಗೊಳಪಡಿಸಿರುವುದು ಪಕ್ಷದ ಗಮನಕ್ಕೆ ಬಂದಿದೆ.
ಇದಲ್ಲದೆ, ಪಕ್ಷದ ನೇತೃತ್ವದ ವಿರುದ್ಧ ನಿರಂತರವಾಗಿ ಅವಮಾನಕಾರಿಯಾಗಿ ಮಾತನಾಡುತ್ತಾ, ಪಕ್ಷದ ಕಾರ್ಯಕರ್ತ ರಲ್ಲಿ ಗೊಂದಲ, ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿರುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದ್ದು, ಈ ವರ್ತನೆ ಪಕ್ಷದ ನಿಯಮಾವಳಿ ಮತ್ತು ಆಂತರಿಕ ಶಿಸ್ತಿಗೆ ಸಂಪೂರ್ಣ ವಿರೋಧವಾಗಿದೆ.
ಈ ಎಲ್ಲಾ ಅಶಿಸ್ತಿನ, ಜವಾಬ್ದಾರಿಯಿಲ್ಲದ ಹಾಗೂ ಪಕ್ಷವಿರೋಧಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಉನ್ನತ ನಾಯಕತ್ವದ ಆದೇಶದ ಮೇರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗುತ್ತಿದೆ ಎಂದು ಈ ಮೂಲಕ ಅಂತಿಮವಾಗಿ ತಿಳಿಸಲಾಗುತ್ತದೆ’ ಎಂದು ಅನಿತಾ ಅವರು ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.







