ಮುಂದುವರೆದ ಬೈಂದೂರು ರೈತರ ಅನಿರ್ದಿಷ್ಠಾವಧಿ ಧರಣಿ

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ ರೈತ ಸಂಘ ಬೈಂದೂರು ವತಿಯಿಂದ ನಿರಂತರವಾಗಿ ಕಳೆದ 21 ದಿನಗಳಿಂದ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ರವಿವಾರ ಭೇಟಿ ನೀಡಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮಂಜುನಾಥ್ ಭಂಡಾರಿ, ಧರಣಿಯ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಮತ್ತು ಈ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಪಡೆದಿದ್ದು ಸಂಬಂಧಪಟ್ಟ ಸಚಿವರ ಜೊತೆ ಕೂಡ ಚರ್ಚಿಸಿದ್ದೇನೆ. ರೈತರ ನಿಯೋಗದ ಜೊತೆ ಈ ಕುರಿತು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಜೊತೆ ಮಾತನಾಡಿದ್ದೇನೆ. ಅ.15ರಂದು ರೈತರ ನಿಯೋಗದ ಜೊತೆ ಬೆಂಗಳೂರಿನಲ್ಲಿ ಸಚಿವರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅತೀ ಶೀಘ್ರದಲ್ಲಿ ರೈತರ ಬೇಡಿಕೆಗೆ ಸೂಕ್ತ ನ್ಯಾಯ ಒದಗಿಸಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುರ್ಮಾ ಶೆಟ್ಟಿ ಗುಡಿಬೆಟ್ಟು, ಪ್ರಮುಖರಾದ ಎಸ್.ರಾಜು ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಮ್ಯಾಥ್ಯೂ ಕೆ.ಎಸ್., ಮಹಾದೇವ ಪೂಜಾರಿ ಕಿಸ್ಮತ್ತಿ, ಪದ್ಮಾಕ್ಷ, ಹೆರಿಯಣ್ಣ ಪೂಜಾರಿ, ನಾಗಪ್ಪ ಮರಾಠಿ ಹೊಸೂರು ಮೊದಲಾದವರು ಉಪಸ್ಥಿತರಿದ್ದರು.
ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.







