ಕೆಸರು ರಾಡಿಯಾದ ಬೈಂದೂರು-ಕೊಲ್ಲೂರು ರಸ್ತೆ; ಸಾರ್ವಜನಿಕರಿಂದ ರಸ್ತೆಯಲ್ಲೇ ಸಸಿನೆಟ್ಟು ಆಕ್ರೋಶ

ಬೈಂದೂರು, ಜು.9: ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ಬೈಂದೂರು-ಕೊಲ್ಲೂರು ರಸ್ತೆಯ ಗೋಳಿಹೊಳೆ, ಆರೆಶಿರೂರು ಮುಂತಾದ ಕಡೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಸೇತುವೆ ನಿರ್ಮಾಣ ಮಾಡು ತ್ತಿರುವ ಸ್ಥಳದಲ್ಲಿ ತಾತ್ಕಾಲಿಕ ಬದಲಿ ರಸ್ತೆ ನಿರ್ಮಿಸಿದ ಪ್ರದೇಶದಲ್ಲಿ ವಾಹನಗಳ ನಿರಂತರ ಸಂಚಾರದಿಂದ ಕಿಲೋಮೀಟರ್‌ಗಟ್ಟಲೆ ರಸ್ತೆ ಕೆಸರಿನಿಂದ ತುಂಬಿದ್ದು ಪ್ರವಾಸಿಗರು ಮತ್ತು ಸ್ಥಳೀಯರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಸ್ಥಳೀಯರ ಆಕ್ರೋಶ: ಕೊಲ್ಲೂರು ರಸ್ತೆ ಅಭಿವೃದ್ದಿ ಗುತ್ತಿಗೆ ಪಡೆದ ಕಂಪೆನಿಯು ಆಮೆಗತಿಯಲ್ಲಿ, ಅವೈಜ್ಞಾನಿಕ ರೀತಿಯ ಕಾಮಗಾರಿ ಮಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಮಸ್ಯೆಗಳ ಕುರಿತಂತೆ ಶಾಸಕರು ಮತ್ತು ಸಂಸದರ ಗಮನಕ್ಕೆ ತರಲಾಗಿತ್ತು.
ಈ ಕುರಿತು ಕರೆದ ಪ್ರತ್ಯೇಕ ಸಭೆಯಲ್ಲಿ ಇದರ ಬಗ್ಗೆ ಮುಂಜಾಗೃತೆ ವಹಿಸಬೇಕೆಂದು ಅಧಿಕಾರಿಗಳಿಗೆ, ಜನಪ್ರತಿನಿಧಿ ಗಳು ಎಚ್ಚರಿಸಿದ್ದರೂ, ಇಲ್ಲಿನ ಸಮಸ್ಯೆ ಮಾತ್ರ ಬಗೆಹರಿಯದೇ, ಸ್ಥಿತಿ ನಿತ್ಯನರಕದಂತಾಗಿದೆ.
ಕಳೆದ ತಿಂಗಳಲ್ಲಿ ಸುರಿದ ಮೊದಲ ಮಳೆಗೆ ನೀರಿನ ಹರಿವಿನಿಂದ ಬದಲಿ ರಸ್ತೆ ಕೊಚ್ಚಿ ಹೋಗಿ ಅವಾಂತರವಾಗಿತ್ತು. ಬಳಿಕ ನಾಲ್ಕೈದು ಬಾರಿ ಈ ಸಮಸ್ಯೆ ಉಲ್ಬಣಿಸಿತ್ತು. ಪ್ರತಿದಿನ ಬೈಂದೂರಿನಿಂದ ನೂರಾರು ಟ್ಯಾಕ್ಸಿಗಳು, ವಾಹನ ಗಳು ಕೊಲ್ಲೂರು ಕಡೆಗೆ ಸಾಗುತ್ತಿದ್ದು, ಕೆಸರಿನಿಂದಾಗಿ ವಾಹನ ಬಾಡಿಗೆ ಪಡೆಯಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಎದುರಾಗಿದೆ.
ಇದು ಸಂಪೂರ್ಣ ಇಲಾಖೆ ಹಾಗೂ ವ್ಯವಸ್ಥೆಯ ಲೋಪವಾಗಿದೆ. ಸಂಸದರು, ಶಾಸಕರು ಈ ಬಗ್ಗೆ ಅಧಿಕಾರಿಗಳಿಗೆ ಗಂಭೀರವಾಗಿ ತಿಳಿಸಬೇಕು. ಜನರು ತಿರುಗಲು ಹರಸಾಹಸಪಡುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯರು ರಸ್ತೆಯ ಕೆಸರು ತುಂಬಿದ ಜಾಗದಲ್ಲಿ ವಿವಿಧ ಸಸಿ ಹಾಗೂ ಬಾಳೆಗಿಡ ನೆಟ್ಟು ದುರಸ್ಥಿಗಾಗಿ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.






