ಬೈಂದೂರು| ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ಪೊಲೀಸರಿಂದ ದಾಳಿ: 16 ಲಕ್ಷ ರೂ. ಮೌಲ್ಯದ ಸೊತ್ತು ವಶ

ಬೈಂದೂರು, ಸೆ.23: ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸರು 16 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬ್ಯಾಟಿಯಾಣಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ದೊರೆತ ಮಾಹಿತಿಯಂತೆ ಸೆ.23ರಂದು ಬೈಂದೂರು ಠಾಣೆಯ ಎಸ್ಸೈ ಸುನಿಲ್ ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವೀಂದ್ರ ಪೂಜಾರಿ ಮತ್ತು ಸತೀಶ್ ಶೆಟ್ಟಿ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಗಣಿಗಾರಿಕೆ ಸ್ಥಳದಲ್ಲಿದ್ದ ಕೆಂಪುಕಲ್ಲು ತುಂಬಿದ 2 ಟಿಪ್ಪರ್‌ಗಳು, ಬ್ಲೇಡ್ ಅಳವಡಿಸಿರುವ 2 ಪವರ್ ಟಿಲ್ಲರ್ ಯಂತ್ರಗಳು ಹಾಗೂ 2 ಕಲ್ಲು ಎತ್ತುವ ಟ್ರಾಲಿ ಮೆಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.






