ಬೈಂದೂರು | ಡಿಸಿಗೆ ಉತ್ಸವದ ಬಗೆಗಿನ ಆಸಕ್ತಿ ರೈತರ ಸಂಕಷ್ಟದ ಬಗ್ಗೆ ಇಲ್ಲ: ರೈತ ಸಂಘ ಆಕ್ರೋಶ

ಸಾಂದರ್ಭಿಕ ಚಿತ್ರ
ಬೈಂದೂರು, ಡಿ.6: ಕಳೆದ 78 ದಿನಗಳಿಂದ ನ್ಯಾಯಕ್ಕಾಗಿ ನೂರಾರು ರೈತರು ತಾಲೂಕು ಆಡಳಿತ ಸೌಧದ ಎದುರು ಅನಿಧಿಷ್ಟಾವಧಿ ಧರಣಿ ನಡೆಸುತ್ತಿದ್ದು ಸಾವಿರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹತ್ತಾರು ಬಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದರು ಕೂಡ, ಕನಿಷ್ಟ ಪಕ್ಷ ಕುಳಿತುಕೊಂಡು ಮಾತನಾಡಿಸಿದ ಜಿಲ್ಲಾಧಿಕಾರಿಗಳು ಬೈಂದೂರಿಗೆ ಬಂದಾಗಲೂ ರೈತರ ಬಳಿ ಬಂದಿಲ್ಲ ಎಂದು ಬೈಂದೂರು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಈವರೆಗೆ ಒಂದು ಅಧಿಕಾರಿಗಳ ನಿಯೋಗ ರಚಿಸಿ ರೈತರ ಸಮಸ್ಯೆ ಆಲಿಸದ ಜಿಲ್ಲಾಧಿಕಾರಿಗಳು ಬೈಂದೂರು ಉತ್ಸವದ ಬಗ್ಗೆ ಮುತುವರ್ಜಿ ವಹಿಸಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ರೈತರನ್ನು ನಿರ್ಲಕ್ಷಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ನಡೆ ಸರಿಯಲ್ಲ ಎಂದು ಬೈಂದೂರು ರೈತ ಸಂಘದ ಅಧ್ಯಕ್ಚ ದೀಪಕ್ ಕುಮಾರ್ ಶೆಟ್ಟಿ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ರೈತರ ಬೇಡಿಕೆ ಶೀಘ್ರ ಈಡೇರಿಸಿ ಸಂಪುಟ ಸಭೆಯಲ್ಲಿಡಲು ಸ್ವತಃ ಸಚಿವರೇ ಸೂಚಿಸಿದ್ದಾರೆ. ಅದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದಿನಕ್ಕೊಂದು ಸಬೂಬು ನೀಡಿ ಸಮಯ ಕಳೆಯುತ್ತಿದ್ದಾರೆ. ಹಾಲಿ ಶಾಸಕರು ಮಾಜಿ ಶಾಸಕರು ಸಂಸದರು ಮಂತ್ರಿಗಳು ಎಲ್ಲರೂ ಕೂಡ ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಿದ್ದರೆ ಯಾವ ಅಡ್ಡಿಯಿಂದ ವಿಳಂಬವಾಗುತ್ತದೆ ಎಂಬುದನ್ನು ತಿಳಿಸಬೇಕು.
ಬೈಂದೂರು ಕುಂದಾಪುರ ತಾಲೂಕಿನಲ್ಲಿ ಇಲಾಖೆ ಹೆಸರಲ್ಲಿ ಮಂಜೂರಾದ ಸಾವಿರಾರು ಲೋಡ್ ಮರಳು ಎಲ್ಲಿಗೆ ಹೋಗಿದೆ. ಮರಳು ದಂಧೆಗೆ ಯಾವ ಕಾನೂನು ನಿಯಮ ಪಾಲನೆ ಇಲ್ಲ. ನಮ್ಮ ರೈತರ ಬೇಡಿಕೆಗೆ ನಿಯಮ ಬೋಧನೆ ಮಾಡುತ್ತಾರೆ. ಮರಳು ದಂಧಗೆ ಹೊಂದಾಣಿಕೆ ನಡೆಯುತ್ತದೆ. ಅಲ್ಲಿ ಯಾವ ಕಾನೂನು ತೊಡಕುಗಳಿಲ್ಲ ಇದು ಜಿಲ್ಲಾಡಳಿತದ ರೈತ ವಿರೋಧಿ ನಡೆಯಾಗಿದೆ. ಹೀಗಾಗಿ ರೈತ ಸಂಘ ಸೋಮವಾರದಿಂದ ಗಣಿ ಇಲಾಖೆಗೆ ಮುತ್ತಿಗೆ ಹಾಕುವ ಸಿದ್ದತೆ ನಡೆಸಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದರು.







