ಬೈಂದೂರು| ಮಹಿಳೆಯ ಚಿನ್ನದ ಬಳೆ ಸುಲಿಗೆ ಪ್ರಕರಣ: ಇಬ್ಬರು ಮಹಿಳೆಯರ ಸಹಿತ ಮೂವರ ಬಂಧನ

ಬೈಂದೂರು, ಎ.29: ಮಹಿಳೆಯ ಚಿನ್ನದ ಬಳೆ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಥಾಣೆಯ ಅವಿನಾಶ್ ಸುನಿಲ್ ಗಾಯಕವಾಡ (27) ಹಾಗೂ ಸಂತೋಷಿ ವಿಶಾಲ್ ಜಾದವ (31) ಹಾಗೂ ಅರ್ಚನಾ ಸುಶೀಲ್ ಜಾದವ (40) ಬಂಧಿತ ಆರೋಪಿಗಳು. ಇವರಿಂದ ಸುಲಿಗೆ ಮಾಡಿರುವ 2.5 ಲಕ್ಷ ರೂ. ಮೌಲ್ಯದ 17.27ಗ್ರಾಂ ತೂಕದ ಚಿನ್ನದ ಬಳೆ ಹಾಗೂ ಕಟ್ಟರ್ ಮತ್ತು ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ.
ಎ.27ರಂದು ಮಧ್ಯಾಹ್ನ ಬೈಂದೂರು ತಾಲೂಕು ಕಚೇರಿಯ ಮುಂಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು, ಧಾರಾವಾಡ ಕಡೆಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಸಲು ಬಸ್ ಕಡೆಗೆ ಹೋಗುತ್ತಿದ್ದ ಸಹನಾ ಪೈ ಎಂಬವರ ಗಮನವನ್ನು ಬೆರೆಡೆ ಸೆಳೆದಿದ್ದು ಈ ವೇಳೆ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಅವರ ಕೈಯಲ್ಲಿನ ಚಿನ್ನದ ಬಳೆಯನ್ನು ಕಟ್ಟರ್‌ನಿಂದ ಕಟ್ ಮಾಡಿ ಸಹನಾ ಪೈರವರನ್ನು ದೂಡಿ ಬಳೆಯನ್ನು ಸುಲಿಗೆ ಮಾಡಿಕೊಂಡು ಮಹಿಳೆಯ ಜೊತೆಯಲ್ಲಿ ಓಡಿ ಹೋಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತದ ಪ್ರಭಾರದಲ್ಲಿರುವ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪೊಲೀಸ್ ಠಾಣೆಯ ಎಸ್ಸೈ ಸುನಿಲ್ ಕುಮಾರ್ ಬಿ.ವೈ. ಮತ್ತು ನವೀನ್ ಬೋರ್ಕರ್ ಹಾಗೂ ಸಿಬ್ಬಂದಿ ನಡೆಸಿದ್ದಾರೆ.




