ಉಡುಪಿ: ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ -ಉಚಿತ ತಪಾಸಣಾ ಶಿಬಿರ

ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಹಾಗೂ ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ ಮತ್ತು ಮಹಿಳಾ ವೈದ್ಯರ ಘಟಕ, ಐಎಂಎ ಉಡುಪಿ ಕರಾವಳಿ ಸಹಯೋಗದೊಂದಿಗೆ ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರವನ್ನು ಇತ್ತೀಚೆಗೆ ಮಣಿಪುರದ ಶ್ರಿನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ರಾಜಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಕ್ಯಾನ್ಸರ್ ರೋಗದ ಕುರಿತಾಗಿ ತಪ್ಪುಕಲ್ಪನೆಗಳನ್ನು ತೆಗೆದುಹಾಕಿ ಸರಿಯಾದ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಸ್ತನ, ಗರ್ಭಕಂಠದ ಕ್ಯಾನ್ಸರ್‌ಗಳನ್ನು ಆರಂಭದಲ್ಲೇ ಸರಿಯಾದ ಸಮಯಕ್ಕೆ ಗುರುತಿಸಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದರು.
ಮಾಹಿತಿ ಕಾರ್ಯಾಗಾರದ ನಂತರ ಸ್ತ್ರೀಯರಿಗೆ ಉಚಿತ ತಪಾಸಣೆ ನಡೆಸಲಾಯಿತು. ಐಎಂಎ ಉಡುಪಿ ಕರಾವಳಿಯ ಮಹಿಳಾ ವೈದ್ಯರ ಘಟಕದ ಅಧ್ಯಕ್ಷೆ ಡಾ.ಅರ್ಚನಾ ಭಕ್ತ, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲದ ಶಿಬಿರ ಸಂಘಟಕಿ ಪುಷ್ಪಲತಾ ಉಪಸ್ಥಿತರಿದ್ದರು. ಸ್ವಯಂಸೇವಕಿ ಶ್ರೀಶಾ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು. ವಂದನಾ ಪೈ ಅತಿಥಿಗಳನ್ನು ಪರಿಚಯಿಸಿದರು. ಸಂಹಿತಾ ಕಾರ್ಯಕ್ರಮ ನಿರೂಪಿಸಿದರು.





