ಪೊಲೀಸರ ವೀಲ್ ಲಾಕ್ ಕಳವು ಮಾಡಿದ ಆರೋಪ: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಮಣಿಪಾಲ, ಫೆ.16: ಪೊಲೀಸರು ಕಾರಿನ ಚಕ್ರಗಳಿಗೆ ಹಾಕಲಾದ ವೀಲ್ ಲಾಕ್‌ಗಳನ್ನು ಚಾಲಕ ಕಳವು ಮಾಡಿದ್ದಾನೆ ಎನ್ನಲಾದ ಘಟನೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಫೆ.16ರಂದು ನಸುಕಿನ ವೇಳೆ ನಡೆದಿದೆ.
ಪೊಲೀಸರು ಕಾರೊಂದನ್ನು ತಡೆದು ತಪಾಸಣೆ ಮಾಡಿದಾಗ ಚಾಲಕ ಕಾಸರಗೋಡು ಉಪ್ಪಳದ ಮೊಹಮ್ಮದ್ ರಿಫಾಝ್ ಮದ್ಯ ಸೇವಿಸಿರುವುದು ಕಂಡುಬಂದಿದೆ. ಈ ಬಗ್ಗೆ ಆತನಲ್ಲಿ ವಾಹನವನ್ನು ಠಾಣೆಗೆ ತಂದು ಇರಿಸುವಂತೆ, ನ್ಯಾಯಾಲಯದಲ್ಲಿ ದಂಡ ಪಾವತಿಸಿದ ಬಳಿಕ ವಾಹನವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು.
ಆದರೆ ಆತ ವಾಹನವನ್ನು ಠಾಣೆಯಲ್ಲಿ ಇರಿಸುವುದಿಲ್ಲ ಮತ್ತು ಕೀಯನ್ನು ಕೊಡುವುದಿಲ್ಲ ಎಂಬುದಾಗಿ ತಕರಾರು ಮಾಡಿದನು. ಅದಕ್ಕೆ ಪೊಲೀಸರು ಸ್ಥಳದಲ್ಲಿಯೇ ಕಾರಿನ ವೀಲ್ ಲಾಕ್ ಮಾಡಿದರು. ನಂತರ ಮೊಹಮ್ಮದ್ ರಿಫಾಝ್ ಕಾರಿನ ಎರಡೂ ಚಕ್ರಗಳಿಗೆ ಹಾಕಿದ ಇಲಾಖಾ ವೀಲ್ ಲಾಕ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವು ಮಾಡಿದ ವೀಲ್ ಲಾಕ್‌ಗಳ ಮೌಲ್ಯ 12,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




