ಮಕ್ಕಳ ಸೃಜನಶೀಲತೆ, ಸಹಜತೆ, ರಂಗಭೂಮಿ ಶಿಕ್ಷಣದಿಂದ ಕಾಪಾಡಲು ಸಾಧ್ಯ: ಡಾ.ಮಹಾಬಲೇಶ್ವರ ರಾವ್

ಉಡುಪಿ, ಜ.18: ಮಕ್ಕಳು ಎಂಬುದು ಸ್ಥಿರವಾದ ಹಂತ ಅಲ್ಲ. ಅದು ಚಲನಶೀಲವಾದುದು, ಅವರು ನಿತ್ಯ ಮಾನಸಿಕ, ದೈಹಿಕ, ಸಾಮಾಜಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ನೈತಿಕವಾಗಿ ಬೆಳೆಯುತ್ತಲೇ ಇರುತ್ತಾರೆ. ಆದರೆ ಮಕ್ಕಳಲ್ಲಿರುವ ಸಂಭ್ರಮ, ಉಲ್ಲಾಸ, ಸೃಜನಶೀಲತೆ, ಸಹಜತೆಯನ್ನು ರಂಗಭೂಮಿ ಶಿಕ್ಷಣ ಚಟುವಟಿಕೆಯ ಮೂಲಕವೇ ಕಾಪಾಡಲು ಸಾಧ್ಯ. ಆ ದೃಷ್ಠಿಯಿಂದ ಶೈಕ್ಷಣಿಕ ರಂಗಭೂಮಿಗೆ ಶಿಕ್ಷಣದಲ್ಲಿ ವಿಶೇಷ ಸ್ಥಾನ ನೀಡಬೇಕಾ ಗಿದೆ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಹಲವು ವರ್ಷಗಳಿಂದ ಶಿಕ್ಷಣದೊಂದಿಗೆ ರಂಗಭೂಮಿಯಲ್ಲೂ ಸಕ್ರಿಯ ರಾಗಿರುವ ಕರಾವಳಿಯ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಹೊಸ ಶಿಕ್ಷಕರಿಗೆ ದಾಟಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಕರಾವಳಿಯ ನಿರ್ದಿಗಂತ ರಂಗ ಸಂಸ್ಥೆಯ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಆಯೋಜಿಸ ಲಾದ ಶೈಕ್ಷಣಿಕ ರಂಗ ಕಮ್ಮಟದಲ್ಲಿ ಅವರು ಮಾತನಾಡುತಿದ್ದರು.
ಮಣಿಪಾಲ ಎಂಜೆಸಿಯ ಉಪಪ್ರಾಂಶುಪಾಲ ನಾಗೇಂದ್ರ ಪೈ ಮಾತನಾಡಿ, ಮಕ್ಕಳ ರಂಗಭೂಮಿಯಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅವರಲ್ಲಿ ಕೀಳರಿಮೆ ದೂರವಾಗಿ, ಎಲ್ಲರೊಂದಿಗೆ ಬೆರೆತು, ಒಳಗೊಳ್ಳುವಿಕೆಯ ಮೂಲಕ ಮುಂದೆ ಸಾಗುತ್ತಾರೆ. ಶಿಕ್ಷಣ ಮತ್ತು ರಂಗಭೂಮಿ ಮುಖಾಮುಖಿ ಯಾಗದೆ ಅಕ್ಕಪಕ್ಕದಲ್ಲಿರಬೇಕು. ಇದರಿಂದ ಇವು ಎರಡೂ ಕೂಡ ಮಕ್ಕಳಿಗೆ ದಕ್ಕುತ್ತದೆ ಮತ್ತು ಮಕ್ಕಳು ಬೆಳೆದು ಮುಂದೆ ಸಮಾಜದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ಕೊಕ್ಕರ್ಣೆ ಶಾಲೆಯ ಶಿಕ್ಷಕ ವರದರಾಜ್ ಬಿರ್ತಿ ಮಾತನಾಡಿ, ರಂಗಭೂಮಿ ಕಲಾವಿದ ಶಿಕ್ಷಕರಾದರೆ ಅವರು ಮಾಡುವ ಪಾಠ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ರಂಗಭೂಮಿಯಲ್ಲಿ ಶಿಕ್ಷಕ ಮಕ್ಕಳ ಜೊತೆ ಸೇರಿ ಕೊಂಡು ಗಳಿಸುವ ಸಂತೋಷ ಎಲ್ಲೂ ಸಿಗಲು ಸಾಧ್ಯ ಇಲ್ಲ. ಹಾಗಾಗಿ ಶಿಕ್ಷಕರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳ ಬೇಕು. ಸವಾಲುಗಳನ್ನು ಎದುರಿಸಲು ತ್ಯಾಗ ಮಾಡಿ ಮುಂದೆ ಸಾಗಬೇಕು. ಆಗ ಯಶಸ್ವಿ ಪಡೆಯಲು ಸಾಧ್ಯ ಎಂದರು.
ಶಿಕ್ಷಕ, ಬೈಂದೂರಿನ ಸುರಭಿ ಸಂಸ್ಥೆಯ ಸುಧಾಕರ ಪಿ.ಬೈಂದೂರು ಮಾತನಾಡಿ, ಮಕ್ಕಳು ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿ ಕೊಳ್ಳಬೇಕು. ಇದರಿಂದ ಶಿಕ್ಷಣ ಮಾತ್ರವಲ್ಲ ಜೀವನ ಪಾಠ ಕೂಡ ಕಲಿಯಲು ಸಾಧ್ಯ ಎಂದು ತಿಳಿಸಿದರು.
ರಂಗ ನಿರ್ದೇಶಕ ಅರುಣಲಾಲ್ ಮಾತನಾಡಿ, ಮಕ್ಕಳ ರಂಗಭೂಮಿ ಯಿಂದ ಇಡೀ ಗ್ರಾಮಕ್ಕೆ ಸಾಕಷ್ಟು ಅನುಕೂಲ ವಾಗಲು ಸಾಧ್ಯವಾಗುತ್ತದೆ. ಮಕ್ಕಳ ಮೂಲಕ ಅವರ ಇಡೀ ಕುಟುಂಬವನ್ನು ರಂಗಭೂಮಿಯೊಂದಿಗೆ ಸಂಪರ್ಕ ಸಾಧಿಸಿಕೊಳ್ಳಬಹುದಾಗಿದೆ. ಬಾಲ್ಯದಲ್ಲೇ ರಂಗಭೂಮಿ ಆಸಕ್ತಿ ಬೆಳೆಸಿಕೊಂಡರೇ ಅವರು ಮುಂದೆ ಸಮಾಜ ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿರುವ ಮನುಷ್ಯರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ನಿರ್ದಿಗಂತದ ಸ್ಥಾಪಕರಲ್ಲೊಬ್ಬರಾದ ರಂಗಕರ್ಮಿ, ಚಿತ್ರನಟ ಪ್ರಕಾಶ್ ರಾಜ್ ಮಾತನಾಡಿ, ಮಕ್ಕಳಿಗೆ ರಂಗಭೂಮಿ ಶಿಕ್ಷಣ ಜೊತೆ ಕಲಿಸುವುದು ಮುಖ್ಯ ಮಾತ್ರವಲ್ಲ, ನಮ್ಮ ಜವಾಬ್ದಾರಿ ಕೂಡ ಆಗಿದೆ. ಆದರೆ ಇಂದು ಮಕ್ಕಳ ರಂಗ ಭೂಮಿ ಕೂಡ ವ್ಯಾಪಾರ ಆಗುತ್ತಿದೆ. ಆ ಕಾರಣಕ್ಕಾಗಿ ನಿರ್ದಿಂಗತ ಮಕ್ಕಳ ರಂಗಭೂಮಿಗೆ ಹೆಚ್ಚು ಒತ್ತು ನೀಡಿ, ಶಿಕ್ಷಕರಿಗೆ ತರಬೇತಿ ನೀಡಿ ಶಾಲೆಗಳಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಉಡುಪಿ ಡಯಟ್ ಉಪನ್ಯಾಸಕ ಡಾ.ಕೆ.ಕಿಶೋರ್ ಕುಮಾರ್ ಶೆಟ್ಟಿ, ಶಿಕ್ಷಕ ಸುರೇಶ್ ಮರಕಾಲ ಮಾತನಾಡಿದರು. ರಂಗ ನಿರ್ದೇಶಕ ಗಣೇಶ್ ಮಂದರ್ತಿ ಕಾರ್ಯಕ್ರಮ ನಿರೂಪಿಸಿದರು.
"ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆಯು ಉತ್ಪನ್ನ, ಪರೀಕ್ಷೆ, ಪಠ್ಯ ಆಧಾರಿತವಾಗಿದೆ. ಶಿಕ್ಷಣದಲ್ಲಿ ಇಂದು ಹೆಸರಿಗೆ ಮಾತ್ರ ಸಂರಕ್ಷಣವಾದ ಇದೆ. ನಿಜವಾಗಿಯೂ ಜಾರಿಗೆ ಬಂದೇ ಇಲ್ಲ. ಪಠ್ಯಪುಸ್ತಕ ಆಧಾರಿತ ಪರೀಕ್ಷ ವ್ಯವಸ್ಥೆ ಈಗಲೂ ಇದೆ. ಅಂಕ ಗಳಿಕೆಯೇ ಮುಖ್ಯವಾಗಿದೆ. ಮಕ್ಕಳ ಪ್ರತಿಭೆಯನ್ನು ಅಂಕದ ಆಧಾರದಲ್ಲೇ ಅಳೆಯ ಲಾಗುತ್ತದೆ. ಅದು ಬಿಟ್ಟು ಬೇರೆ ಮಕ್ಕಳ ಪ್ರತಿಭೆಗೆ ಯಾವುದೇ ಬೆಲೆ ಇಲ್ಲ. ವಿಷಮ ವರ್ತುಲವಾದ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಆದುದರಿಂದ ಮಕ್ಕಳ ನಾಟಕಗಳು ನಮ್ಮ ಜಡವಾದ ಶಿಕ್ಷಣ ವ್ಯವಸ್ಥೆಗೆ ಹೊಸ ರಕ್ತದಾನ ಆಗಬೇಕಾಗಿದೆ".
-ಡಾ.ಮಹಾಬಲೇಶ್ವರ ರಾವ್, ಶಿಕ್ಷಣ ತಜ್ಞರು
"ರಂಗ ಶಿಕ್ಷಣದಿಂದ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ ವಾಗುತ್ತದೆ. ಅವರಲ್ಲಿ ಮಾನವೀಯ ಮೌಲ್ಯಗಳು ಬೆಳೆಯುತ್ತದೆ. ಇದನ್ನು ರಂಗ ಶಿಕ್ಷಣ ಮಾತ್ರ ಕೊಡುತ್ತದೆ. ಶಿಕ್ಷಕನಿಗೆ ಪಠ್ಯದ ಕಠಿಣ ಪಾಠವನ್ನು ಮಕ್ಕಳಿಗೆ ಅರ್ಥೈಸಲು ಸಾಧ್ಯವಾಗದೇ ಇರುವುದನ್ನು ರಂಗ ನಿರ್ದೇಶಕ ನಾಟಕದ ಮೂಲಕ ಸಾಧಿಸಿ ತೋರಿಸುತ್ತಿದ್ದಾರೆ. ಇದರಿಂದ ನಾವು ಶೈಕ್ಷಣಿಕ ರಂಗಭೂಮಿಯ ಸಾಮರ್ಥ್ಯವನ್ನು ಕಂಡುಕೊಳ್ಳಬೇಕಾಗಿದೆ"
-ಡಾ.ಕೆ.ಕಿಶೋರ್ ಕುಮಾರ್ ಶೆಟ್ಟಿ, ಉಡುಪಿ ಡಯಟ್ ಉಪನ್ಯಾಸಕರು
"ಕರಾವಳಿಯಲ್ಲಿ ರಂಗಭೂಮಿಯ ತಂಡಗಳು ಹಾಗೂ ರಂಗಸಕ್ತಾರ ದೊಡ್ಡ ಜವಾಬ್ದಾರಿ ಅಂದರೆ ಮಕ್ಕಳ ರಂಗ ಭೂಮಿ ಕಟ್ಟಬೇಕಾಗಿರುವುದು. ಇದರಿಂದ ಮಾತ್ರ ನಾವು ಸರಕಾರವನ್ನು ಒತ್ತಾಯಿಸಲು ಸಾಧ್ಯವಾಗುತ್ತದೆ. ಮಕ್ಕಳನ್ನು ಬೆಳೆಯಲು ಬಿಡದೆ ಇರುವುದರಿಂದ ಮಕ್ಕಳು ಇಂದು ಕಳೆದು ಹೋಗುತ್ತಿದ್ದಾರೆ. ಆದುದರಿಂದ ಮಕ್ಕಳು ಬೆಳೆಸುತ್ತೇವೆ ಎಂಬ ಅಹಂಕಾರ ಬಿಟ್ಟು ಅವರನ್ನು ಬೆಳೆಯಲು ಬಿಡುತ್ತೇವೆ ಎಂಬ ವಿನಯವನ್ನು ರೂಢಿಸಿ ಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಬಹಳ ದೊಡ್ಡ ಕೆಲಸ ಮಾಡಬೇಕಾಗಿದೆ. ಅದು ನಮ್ಮ ಜವಾಬ್ದಾರಿಯಾಗಿದೆ"
-ಪ್ರಕಾಶ್ ರಾಜ್, ನಟ







