ಹೆಮ್ಮಾಡಿಯಲ್ಲೀಗ ಬೆಳೆಯುತ್ತಿದೆ ಚಿತ್ರದುರ್ಗದ ‘ಚಾಂದಿನಿ’ ಸೇವಂತಿಗೆ

ಹೆಮ್ಮಾಡಿ (ಕುಂದಾಪುರ), ಜ.13: ಕುಂದಾಪುರ ತಾಲೂಕಿನ ಹೆಮ್ಮಾಡಿ, ಕಟ್ಟು ಹಾಗೂ ಆಸುಪಾಸಿನ ಗ್ರಾಮಗಳ ಗದ್ದೆಗಳಲ್ಲಿ ಈಗ ಸೇವಂತಿಗೆ ಹೂವು ನಳನಳಿಸುತ್ತಿವೆ. ಮಾರಣಕಟ್ಟೆ ಜಾತ್ರೆ ಹಾಗೂ ಸಂಕ್ರಾಂತಿ ಹಬ್ಬಗಳಿಗೆ ಈ ಹೂವುಗಳು ಪ್ರಮುಖವಾಗಿ ಬಳಕೆಯಾಗುತ್ತವೆ. ಹೆಮ್ಮಾಡಿಯಲ್ಲಿ ಬೆಳೆದ ಸೇವಂತಿಗೆ ಹೂವುಗಳಿಲ್ಲದೇ ನಾಳೆಯಿಂದ ಪ್ರಾರಂಭಗೊಳ್ಳುವ ಮಾರಣಕಟ್ಟೆ ಜಾತ್ರೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ ಉಳಿದ ಹೂವನ್ನು ರೈತರು ಮಾರಾಟ ಮಾಡುವ ಸಂಪ್ರದಾಯವಿದೆ.
ಹೀಗೆ ಜಾತ್ರೆ, ಕೆಂಡದ ಹಬ್ಬಗಳಿಗಾಗಿ ಸೇವಂತಿಗೆ ಹೂವು ಬೆಳೆಯುವ ಹೆಮ್ಮಾಡಿಯಲ್ಲಿ ಈಗ ‘ಹೆಮ್ಮಾಡಿ ಸೇವಂತಿಗೆ’ ಯೊಂದಿಗೆ ಚಿತ್ರದುರ್ಗದಲ್ಲಿ ಪ್ರಸಿದ್ಧಿ ಪಡೆದಿರುವ ‘ಚಾಂದಿನಿ’ ಸೇವಂತಿಗೆ ಹೂವುಗಳನ್ನು ಸಹ ಬೆಳೆಯಲು ಇಲ್ಲಿನ ಕೃಷಿಕರು ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಈ ಪರಿಸರದಲ್ಲಿ ‘ಚಾಂದಿನಿ’ ಸೇವಂತಿಗೆ ಹೂವು ಬೆಳೆಯುತ್ತಿದ್ದು, ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಹಲವು ವರ್ಷಗಳಿಂದ ಹೆಮ್ಮಾಡಿ ಸೇವಂತಿಗೆ ಹೂವು ಬೆಳೆಯುತ್ತಿರುವ ಪ್ರಶಾಂತ್ ಭಂಡಾರಿಯವರು ಇದೇ ಮೊದಲ ಬಾರಿಗೆ ‘ಚಾಂದಿನಿ’ ಸೇವಂತಿಗೆ ಹೂವಿನ ತಳಿಯನ್ನು ಇಲ್ಲಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಸುಮಾರು 70 ಸೆಂಟ್ಸ್ ಜಾಗದಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳದಿದ್ದು, 10 ಸೆಂಟ್ಸ್ ಜಾಗದಲ್ಲಿ ಚಾಂದಿನಿಯನ್ನು ಬೆಳೆಯುತಿದ್ದಾರೆ.
‘ಚಾಂದಿನಿ’ ಸೇವಂತಿಗೆ ಹೆಚ್ಚು ಇಳುವರಿ ಕೊಡುತ್ತದೆ ಎನ್ನಲಾಗುತ್ತಿದ್ದು, ರೋಗ ಬಾಧೆಯೂ ತುಸು ಕಡಿಮೆ. ಇದಲ್ಲದೆ ಬಿಸಿಲಿಗೆ ಬೇಗ ಬಾಡುವುದಿಲ್ಲ. ಚಿಕ್ಕ ಗಾತ್ರವಿರುವ ಚಾಂದಿನಿಯು ಸಹ ಹೆಮ್ಮಾಡಿ ಸೇವಂತಿಗೆಯಂತೆ ಮೋಹಕ ಚೆಲುವನ್ನೆ ಹೋಲುತ್ತದೆ. ಹೂವು ಮಾರುವವರು ಸಹ ಇದನ್ನೆ ಹೆಚ್ಚು ಖರೀದಿಸುತ್ತಾರೆ. ಅದಕ್ಕಾಗಿ ಇಲ್ಲಿಯೂ ಚಾಂದಿನಿ ಯನ್ನೆ ಬೆಳೆದರೇ ಹೇಗೆ ಅಂದುಕೊಂಡು 2-3 ಮಂದಿ ಬೆಳೆಗಾರರು ಸೇರಿ ಸ್ವಲ್ಪ ಜಾಗದಲ್ಲಿ ಬೆಳೆಸಿದ್ದೇವೆ ಎಂದು ಅವರು ಹೇಳುತ್ತಾರೆ.
ಹೆಮ್ಮಾಡಿ ಸೇವಂತಿಗೆ 4 ತಿಂಗಳ (120 ದಿನ) ಬೆಳೆಯಾಗಿದ್ದರೆ, ಸೆಂಟ್ ಯೆಲ್ಲೊ ಮೂರುವರೆ ತಿಂಗಳ (100 ದಿನ) ಬೆಳೆಯಾಗಿದೆ. ಇನ್ನು ಚಾಂದಿನಿ ಸೇವಂತಿಗೆಯು ಸಹ ಹೆಮ್ಮಾಡಿ ಸೇವಂತಿಗೆಯಂತೆ 4 ತಿಂಗಳ (120ದಿನ) ಬೆಳೆಯಾಗಿದೆ.
ಪ್ರಶಾಂತ್ ಭಂಡಾರಿ ಈ ಹಿಂದೆ ಇಲ್ಲಿ ನೆಲಮಂಗಲ ಸೇವಂತಿಗೆ (ಟೆಂಟ್ ಯೆಲ್ಲೊ) ಬೆಳೆದು, ಮೊದಲ ಬಾರಿಗೆ ಬೇರೆಡೆಯ ಹೂವನ್ನು ಇಲ್ಲಿ ಬೆಳೆಯುವ ಪ್ರಯತ್ನ ಮಾಡಿದ್ದರು. ಈ ಬಾರಿ ಸ್ವಲ್ಪ ಭಾಗದಲ್ಲಿ ಬೆಳೆದಿದ್ದಾರೆ. ಆದರೆ ಇದು ಊರಿನ ಸೇವಂತಿಗೆಗಿಂತ ಇಳುವರಿ ಸ್ವಲ್ಪ ಕಡಿಮೆ ಅನ್ನುವುದು ಅವರ ಅಭಿಪ್ರಾಯ.
ಹೆಮ್ಮಾಡಿ ಸೇವಂತಿಗೆ ಹೂವು ಸೇವಂತಿಗೆ ತಳಿಗಳಲ್ಲಿಯೇ ವಿಶಿಷ್ಟವಾದುದು. ಆಕರ್ಷಕವಾದ, ಕಣ್ಮನ ಸೆಳೆಯುವ ಬಣ್ಣ, ಚಿಕ್ಕ ಗಾತ್ರ, ಘಮ-ಘಮ ಸುವಾಸನೆ, ಮೋಹಕ ಚೆಲುವು, ಹೆಚ್ಚು ಬಾಳಿಕೆಯ ಗುಣ- ಈ ರೀತಿ ತನ್ನದೇ ಆದ ವೈಶಿಷ್ಟ್ಯವನ್ನು ಇದು ಹೊಂದಿದೆ.
ಆದರೆ ಇತ್ತೀಚಿನ ವಿಪರೀತ ಬಿಸಿಲು, ಸೆಖೆಯ ಹಿನ್ನೆಲೆಯಲ್ಲಿ ಅರಳಿದ ಹೂವು ಹೆಚ್ಚು ಬಾಳಿಕೆ ಬರುತ್ತಿಲ್ಲ. ಇದಲ್ಲದೆ ಹವಾಮಾನ ದಿನಕ್ಕೊಂದು ರೀತಿ ಇರುವ ಕಾರಣಕ್ಕೆ ಹೂವಿನ ಬೆಳೆಗೂ ಸಮಸ್ಯೆಯಾಗುತ್ತಿದೆ. ಮೋಡ, ಮಳೆಯಿದ್ದರೆ ಚಳಿ, ಇಬ್ಬನಿ ಇರಲ್ಲ. ಇದರಿಂದ ಗಿಡ, ಹೂವಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದಲ್ಲದೆ ಈಗ ನುಸಿ, ಕೀಟ ಬಾಧೆಯೂ ಹೆಚ್ಚು. ಈ ಎಲ್ಲ ಕಾರಣದಿಂದ ಪರ್ಯಾಯ ತಳಿಯಾದ ಚಾಂದಿನಿಯನ್ನು ಬೆಳೆಯುವ ಪ್ರಯತ್ನವನ್ನು ಬೆಳೆಗಾರರು ಮಾಡಿದ್ದಾರೆ.
ಕೆಲ ದಿನಗಳಿಂದ ದಿನಕ್ಕೊಂದು ರೀತಿಯ ಹವಾಗುಣವಿದ್ದು, ಇದರಿಂದ ಸೇವಂತಿಗೆ ಬೆಳೆಗೆ ಸಮಸ್ಯೆಯಾಗುತ್ತಿದೆ. ಇವುಗಳಿಗೆ ಚಳಿ, ಇಬ್ಬನಿ ಬೇಕು. ಮೋಡ, ಮಳೆ, ಬಿಸಿಲು ಜಾಸ್ತಿಯಿದ್ದರೂ ಹೂವಿನ ಬೆಳವಣಿಗೆಗೆ ಕಷ್ಟ. ಕಳೆದ ಬಾರಿಗಿಂತ ಈ ಸಲ ರೋಗ ಸ್ವಲ್ಪ ಕಡಿಮೆಯಿದೆ. ಈ ಬಾರಿ ಹೊಸದಾಗಿ ಚಾಂದಿನಿ ತಳಿಯನ್ನು ಪ್ರಯತ್ನಿಸಿದ್ದೆನೆ. ಹೆಚ್ಚು ಇಳುವರಿ, ಬಾಳಿಕೆಯೂ ಹೆಚ್ಚು ಎಂದು ಕೇಳಿದ್ದೇನೆ. ಅದಕ್ಕಾಗಿ ಬೆಳೆಯುತ್ತಿದ್ದೇನೆ.
-ಪ್ರಶಾಂತ್ ಭಂಡಾರಿ, ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ.







