ಚಳುವಳಿ ಮಾದರಿಯ ‘ಸ್ವಚ್ಛ ಕಡಲ ತೀರ ಹಸಿರು ಕೋಡಿ’ ಅಭಿಯಾನ: ಸಂಸದ ಕೋಟ ಶ್ರೀನಿವಾಸ ಪೂಜಾರಿ
50ನೇ ತಿಂಗಳ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಕುಂದಾಪುರ, ಅ.31: ಸಮುದ್ರ ತೀರ ಅತ್ಯಂತ ಸ್ವಚ್ಚವಾಗಿರಬೇಕು ಎಂಬುದು ಪ್ರಧಾನಿಗಳ ಆಶಯವೂ ಹೌದು. ಕೋಡಿ ಬ್ಯಾರೀಸ್ ಸಂಸ್ಥೆ ಮೂಲಕ ಕಡಲ ಕಿನಾರೆ ಸ್ವಚ್ಚತೆ ಕಾರ್ಯ ಚಳುವಳಿಯ ಮಾದರಿಯಲ್ಲಿ ನಡೆಯುತ್ತಿದ್ದು ಯುವ ಜನಾಂಗಕ್ಕೆ, ಮುಂದಿನ ಪೀಳಿಗೆಗೆ ಅನುಕರಣೀಯವಾಗಿದೆ. ಭಾರತ ದೇಶದ 10 ಸಾವಿರ ಕಿ.ಮೀ ಸಮುದ್ರ ತೀರ ಪರಿಪೂರ್ಣವಾಗಿ ಸ್ವಚ್ಚವಾದರೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯದ ಜಾಗೃತಿಯ ಉದ್ದೇಶದಿಂದ ಸತತವಾಗಿ ನಡೆಸಿಕೊಂಡು ಬರಲಾಗುತ್ತಿರುವ ’ಸ್ವಚ್ಛ ಕಡಲತೀರ ಹಸಿರು ಕೋಡಿ’ ಅಭಿಯಾನದ ಅಂಗವಾಗಿ 50ನೇ ತಿಂಗಳ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ಕೆ ಕೋಡಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಶನಿವಾರ ಲೋಗೋ ಬಿಡುಗಡೆಗೊಳಿಸಿ, ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸ್ವಚ್ಚತಾ ವಿಚಾರಗಳು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಬೇಕು. ಜನರು ಪ್ರಕೃತಿಯನ್ನು ಆಸ್ವಾದಿಸಬೇಕು ಹೊರತು ಪ್ರಕೃತಿಗೆ ತೊಂದರೆ ಮಾಡುವುದು ಸರಿಯಲ್ಲ. ವಾತಾವರಣವನ್ನು ಹಾಳು ಮಾಡುವ ಸಂಗತಿಗಳು ನಡೆಯುತ್ತಿದ್ದು ಮೊದಲಿಗೆ ನಮ್ಮ ಮನೆ, ಕಾರ್ಯಕ್ಷೇತ್ರ, ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್‌ನ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ನಾವು ಈ ಸುಂದರ ಪ್ರಕೃತಿಯ ಬಳಕೆದಾರರು. ಅದನ್ನು ಉಳಿಸಿಕೊಳ್ಳುವ ಮಹತ್ತರ ಜವಬ್ದಾರಿ ನಮ್ಮದಾಗಿದೆ. ದೇಶದ ಮುಂದಿನ ಭವಿಷ್ಯವಾದ ಯುವ ಜನರಲ್ಲಿ ಪರಿಸರ ಪ್ರೇಮ, ಕಾಳಜಿ, ಸ್ಥಿರತೆಯಿದ್ದರೆ ಸ್ವಚ್ಚತಾ ಅಭಿಯಾನದ ಉದ್ದೇಶ ಸಾರ್ಥಕವಾಗುತ್ತದೆ. ಪೃಕೃತಿ ಉಳಿಸಿಕೊಳ್ಳುವುದು ಎಲ್ಲರ ಬದ್ಧತೆ ಮತ್ತು ಕರ್ತವ್ಯವಾಗಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಪ್ರಪಂಚದ ಎಲ್ಲಾ ಭಾಗದಲ್ಲಿ ಹವಮಾನ ವೈಪರಿತ್ಯಗಳಾಗುತ್ತಿದ್ದು ಮಾಲಿನ್ಯ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಕೂಗು ಕೇಳಿಬರುತ್ತಿದೆ. ಈ ನಡುವೆಯೇ ಕರಾವಳಿಯ ಕೋಡಿ ಭಾಗದಲ್ಲಿ ಸಯ್ಯದ್ ಬ್ಯಾರಿ ನೇತೃತ್ವದಲ್ಲಿ ಕಳೆದ 50 ತಿಂಗಳುಗಳಿಂದ ಸರಕಾರ ಮಾಡಬೇಕಾದ ಜವಬ್ದಾರಿಯುತ ಕಾರ್ಯವನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಮೂಲಕ ಎಲ್ಲರನ್ನು ಒಗ್ಗೂಡಿಸಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ಕ್ಯಾಪ್ಟನ್ ಇಮ್ತಿಯಾಝ್, ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಡಿ.ಗೌಡ, ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಸಂಚಾರ ಠಾಣೆಯ ಎಸ್ಸೈ ಅನೂಪ್ ನಾಯಕ್, ಪುರಸಭೆಯ ಆರೋಗ್ಯ ನಿರೀಕ್ಷಕ ರಾಘವೇಂದ್ರ, ವಂಡ್ಸೆ ಗ್ರಾಪಂ ಪಿಡಿಒ ಶಂಕರ್ ಆಚಾರ್ಯ, ಕೋಟೇಶ್ವರ ಪಿಡಿಒ ಸುನೀಲ್, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ದೆಹಲಿಯ ಸುಶಾಂತ್ ಶ್ರೀವಾತ್ಸವ್, ಎಂಎಸ್‌ಡಿಸಿ ಮಣಿಪಾಲದ ಅಧ್ಯಕ್ಷ ಬ್ರಿಗೇಡ್ ಡಾ.ಸರ್ಜಿತ್ ಸಿಂಗ್ ಪಾಬ್ಲಾ, ಸಾಮಾಜಿಕ ಕಾರ್ಯಕರ್ತ ರಾಕೇಶ್ ಸೋನ್ಸ್, ಸಿಎಸ್ಪಿ ಎಎಸ್‌ಐ ಬಾಬು ಪೂಜಾರಿ, ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ನಮ್ಮ ನಾಡು ಒಕ್ಕೂಟದ ಅಧ್ಯಕ್ಷ ಹುಸೇನ್ ಹೈಕಾಡಿ, ರೆಡ್‌ಕ್ರಾಸ್ ಅಧ್ಯಕ್ಷ ಜಯಕರ ಶೆಟ್ಟಿ, ಕೋಡಿ ಶ್ರೀಚಕ್ರೇಶ್ವರಿ ದೇವಸ್ಥಾನದ ಮೊಕ್ತೇಸರ ಗೋಪಾಲ ಪೂಜಾರಿ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಕೋಟೆ ಪ್ರಭಾಕರ ಶೇರಿಗಾರ್, ಕೋಶಾಧಿಕಾರಿ ಶಂಕರ ಪೂಜಾರಿ, ಸದಸ್ಯ ಅಬ್ದುಲ್ಲಾ ಕೋಡಿ, ಪುರಸಭೆ ಮಾಜಿ ಸದಸ್ಯರಾದ ಲಕ್ಷ್ಮೀ, ಕಮಲಾ, ಅಶ್ಫಾಕ್, ಕ್ಲೀನ್ ಕುಂದಾಪುರ ಟೀಂನ ಕಲ್ಪನಾ ಭಾಸ್ಕರ್, ಮೀನುಗಾರ ಮುಖಂಡ ನಾಗರಾಜ ಕಾಂಚನ್, ರೀಫ್ ವಾಚ್ ಸಂಸ್ಥೆಯ ವೆಂಕಟೇಶ್, ಕೋಸ್ಟಲ್ ಗ್ರೀನ್ ಟ್ರಸ್ಟ್‌ನ್ನ ರವೀಂದ್ರ ಭಟ್, ನಮ್ಮಭೂಮಿ ಸಂಸ್ಥೆಯ ಗಣೇಶ್ ಶೆಟ್ಟಿ, ರಾಯಲ್ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ ಬೆಟ್ಟಿನ್, ವಂಡ್ಸೆ ಸರಕಾರಿ ಶಾಲೆಯ ಶಿಕ್ಷಕ ಸದಾಶಿವ, ಭಂಡಾರ್‌ಕಾರ್ಸ್ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಅರುಣ, ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್‌ಗೈಡ್ಸ್ ಅಧಿಕಾರಿ ಸುಬ್ರಮಣ್ಯ, ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಡಾ. ಆಸಿಫ್ ಬ್ಯಾರಿ, ಕ್ಯಾಂಪಸ್ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಬೀಚ್ ಕ್ಲೀನಿಂಗ್ ಅಂಬಾಸಿಡರ್ ಶರ್ಮಿನ್ ಬಾನು ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರಿಸ್ ಬಿ.ಎಡ್ ಹಾಗೂ ಡಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್ ಸ್ವಾಗತಿಸಿ, ಸೀಸೈಡ್ ಪಬ್ಲಿಕ್ ಶಾಲೆ ಅಧ್ಯಾಪಕಿ ಶ್ವೇತಾ ಕೆ. ನಿರೂಪಿಸಿದರು. ಪಿಯು ಕಾಲೇಜಿನ ಉಪನ್ಯಾಸಕಿ ಲಮೀಸ್ ವಂದಿಸಿದರು. ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮಾ, ಜಯಶೀಲ ಶೆಟ್ಟಿ, ಝಿಯಾನ, ಶಬೀನಾ ಸಹಕರಿಸಿದರು.
‘ಕೋಡಿಯನ್ನು ಸ್ವಚ್ಚವಾಗಿಸುವ ಜೊತೆಗೆ ವ್ಯಸನ ಮುಕ್ತ ಕೋಡಿ ಮಾಡುವ ಚಿಂತನೆ ಹೊಂದಿದ್ದು, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಸ್ವಚ್ಚತಾ ಅಭಿಯಾನದಂತೆ ’ವ್ಯಸನ ಮುಕ್ತ ಕೋಡಿ’ ಮಾಡುವ ಮೂಲಕ ಮಕ್ಕಳು, ಮಹಿಳೆಯರ ರಕ್ಷಣೆ ಮಾಡುವುದು ಹೊಸ ಧ್ಯೇಯವಾಗಿದೆ. ಹಾಗೆಯೇ ಸಂಸ್ಥೆಯಿಂದ ವಯಸ್ಕರ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಇರಾದೆ ಇದೆ’
-ಸಯ್ಯದ್ ಮುಹಮ್ಮದ್ ಬ್ಯಾರಿ, ಸಂಚಾಲಕರು, ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್






