ಪರ್ಯಾಯದಲ್ಲಿ ಅಸಂವಿಧಾನಿಕ ಕೃತ್ಯ ಎಸಗಿರುವ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಸಹಬಾಳ್ವೆ ಆಗ್ರಹ

ಫೈಲ್ ಫೋಟೊ
ಉಡುಪಿ, ಜ.20: ಉಡುಪಿ ಪರ್ಯಾಯ ಉತ್ಸವದಲ್ಲಿ ಭಾಗವಹಿಸಿದ ಉಡುಪಿಯ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆರ್ಎಸ್ಎಸ್ ಸಂಘಟನೆಯ ಧ್ವಜವನ್ನು ಹಿಡಿದು, ಬೀಸುತ್ತಾ ಪುರ ಪ್ರವೇಶಕ್ಕೆ ಸ್ವಾಗತ ನೀಡಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಸಿಯ ಈ ವರ್ತನೆ ಖಂಡನೀಯ. ಜಿಲ್ಲಾಧಿಕಾರಿ ಸಂವಿಧಾನ ನಿಯಮಬಾಹಿರ ವರ್ತನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಹಬಾಳ್ವೆ ಉಡುಪಿ ಆಗ್ರಹಿಸಿದೆ.
ಜಿಲ್ಲಾಧಿಕಾರಿಯವರಾಗಲೀ ಜಿಲ್ಲಾಡಳಿತದ ಭಾಗವಾಗಿರುವ ಯಾವುದೇ ನೌಕರರು ಇರಲೀ, ಸಾರ್ವಜನಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸು ವಾಗ ಸಂವಿಧಾನದ ನಿಯಮಗಳ ಒಳಗೆ ನಡೆದುಕೊಳ್ಳಬೇಕು. ಅದನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಲೇ ಬೇಕು. ತಮ್ಮ ಸಂವಿಧಾನ ವಿರೋಧಿ ನಡೆಗೆ ಸಮರ್ಥನೆಯಾಗಿ ಸ್ವರೂಪ, ತಾವು ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ, ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು, ಅದರಲ್ಲಿ ಬೇರೆ ರಾಜಕೀಯ ಹಿತಾಸಕ್ತಿ ಇರಲಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿ ಜಿಲ್ಲಾಡಳಿತದ ಪರವಾಗಿ ಭಾಗವಹಿಸಿದಾಗ, ಸಂವಿಧಾನಿಕ ನಿಯಮಗಳನ್ನು ಪಾಲಿಸಬೇಕು ಎಂಬ ಜಾಗೃತಿ ಇಟ್ಟುಕೊಳ್ಳಬೇಕಿತ್ತು.
ಯಾರೋ ದೊಣ್ಣೆ ನಾಯಕರು, ಸಂವಿಧಾನ ವಿರೋಧಿ, ಮತ ವಿಭಜಕ ಸಂಘಟನೆಯ ಧ್ವಜವನ್ನು ಮೆರೆಸಲು ಕುಮ್ಮಕ್ಕು ಕೊಟ್ಟರೆ, ತಮ್ಮ ಸ್ಥಾನಮಾನದ ಘನತೆ ತೋರಿ ನಿರಾಕರಿಸಬೇಕಿತ್ತು. ಅದನ್ನು ಬಿಟ್ಟು, ಈ ಬಗೆಯಲ್ಲಿ ವರ್ತಿಸಿದ್ದೇ ಅಲ್ಲದೇ, ತಮ್ಮ ನಡೆಯನ್ನು ತಮ್ಮ ಸ್ಥಾನವನ್ನು ಮುಂದು ಮಾಡಿ ಸಮರ್ಥಿಸಿಕೊಳ್ಳುವುದು ಜಿಲ್ಲೆಯ ಶಾಂತಿ ಭಂಜಕ ಶಕ್ತಿಗಳಿಗೆ ಏನು ಸಂದೇಶ ಕೊಡುತ್ತದೆ. ನಿರಂತರ ಹಲ್ಲೆಗೆ ತುತ್ತಾಗುತ್ತಿರುವ ಜನ ಸಮುದಾಯಗಳಿಗೆ ಯಾವ ರೀತಿಯ ಆತಂಕ ಹುಟ್ಟಿಸುತ್ತದೆ ಎಂಬ ಅರಿವು ಜಿಲ್ಲಾಧಿಕಾರಿಯ ವರಿಗೆ ಇದ್ದಂತಿಲ್ಲ ಎಂದು ಸಮಿತಿಯ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







