ರಾಜ್ಯದ 230 ಸಣ್ಣ ಭಾಷೆಗಳ ಸಬಲೀಕರಣಕ್ಕೆ ಸಮಿತಿಯಿಂದ ಅಧ್ಯಯನ: ಡಾ.ಬಿಳಿಮಲೆ

ಉಡುಪಿ, ಜು.22: ರಾಜ್ಯದಲ್ಲಿ ಕನ್ನಡ ಭಾಷೆಯೊಂದಿಗೆ ಸುಮಾರು 230 ಸಣ್ಣ ಸಣ್ಣ ಭಾಷೆಗಳಿವೆ. ಇವುಗಳನ್ನು ಉಳಿಸಿ ಬೆಳೆಸುವುದು ಕೂಡಾ ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ಈ ಭಾಷೆಗಳ ಸಬಲೀಕರಣಕ್ಕಾಗಿ ಡಾ.ಜಿ.ಎನ್.ದೇವಿ, ಡಾ.ವಿ.ಪಿ.ನಿರಂಜನಾರಾಧ್ಯ ಮುಂತಾದ ವಿದ್ವಾಂಸರ ಸಮಿತಿಯೊಂದಿಗೆ ರಚಿಸಿದ್ದು, ಅದು ಶೀಘ್ರದಲ್ಲೇ ವರದಿಯನ್ನು ನೀಡಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರಾಧಿಕಾರದ ವತಿಯಿಂದ ನಡೆದ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಕನ್ನಡದ ಪ್ರಗತಿ, ಏಳಿಗೆಗಾಗಿ ಕೆಲಸ ಮಾಡುವ ಜೊತೆಗೆ ರಾಜ್ಯದಲ್ಲಿರುವ 230ರಷ್ಟು ಸಣ್ಣ ಭಾಷೆಗಳನ್ನು ಸಹ ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿಯನ್ನು ಹೊಂದಿದೆ. ತುಳು, ಕೊಡವ, ಕುಂದಾಪುರ ಕನ್ನಡ, ಹವ್ಯಕ, ಅರೆಭಾಷೆ, ಕರಾವಳಿಯ ಸುಮಾರು 2000 ಮಂದಿ ಕೊರಗು ಮಾತನಾಡುವ ಕೊರಗ ಭಾಷೆ, ಕುಂದಾಪುರ ಆಸುಪಾಸಿನಲ್ಲಿ ಇಂದು ಕಣ್ಮರೆಯಾಗಿರುವ ಬೆಳರಿ ಭಾಷೆಗಳಂಥ ಸಣ್ಣ ಭಾಷೆಗಳು ಸಾಯುತ್ತಿರುವಾಗ ಅದು ಸಾಯದಂತೆ ತಡೆಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಸಹ ಆಗಿದೆ ಎಂದರು.
ಇದಕ್ಕಾಗಿ ಡಾ.ದೇವಿ, ಡಾ.ನಿರಂಜನಾರಾಧ್ಯರ ನೇತೃತ್ವದಲ್ಲಿ ಸಮಿತಿ ಯೊಂದನ್ನು ಪ್ರಾಧಿಕಾರ ರಚಿಸಿದ್ದು ಅದು ಕರ್ನಾಟಕದಲ್ಲಿ ಸಣ್ಣ ಭಾಷೆಗಳ ಸಬಲೀಕರಣದ ಕುರಿತಂತೆ ಅಧ್ಯಯನ ನಡೆಸಿ ಈ ಭಾಷೆಗಳ ಉಳಿವಿಗೆ ಮಾಡಬೇಕಾದ ಕೆಲಸದ ಕುರಿತು ವರದಿ ನೀಡಲಿದೆ. ಸಮಿತಿ ತನ್ನ ವರದಿಯನ್ನು ಇನ್ನೂ ನೀಡಬೇಕಿದೆ. ವರದಿ ಶಿಫಾರಸ್ಸು ನೋಡಿಕೊಂಡು ಮುಂದಿನ ಕ್ರಮಕ್ಕೆ ಸರಕಾರಕ್ಕೆ ಬರೆಯಲಾಗುವುದು ಎಂದರು.
1992ರಲ್ಲಿ ಪ್ರಾರಂಭಗೊಂಡ ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷನಾಗಿ ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ 36 ಸಂಸ್ಥೆಗಳನ್ನು ಭೇಟಿ ಮಾಡಿದ್ದೇನೆ. 14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ 36 ಸಂಸ್ಥೆಗಳಿಗೆ ಭೇಟಿ ನೀಡಿದ್ದೇವೆ. ಇವುಗಳಲ್ಲಿ ವಿವಿಗಳು, ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರಕಾರ ಅಧೀನದ ಸಂಸ್ಥೆಗಳಿ ಗೆಲ್ಲಾ ಹೋಗಿ ಅಲ್ಲಿ ಕನ್ನಡ ಎಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಸಲಹೆ-ಸೂಚನೆಗಳನ್ನು ನೀಡಿದ್ದೇವೆ ಎಂದರು.
ರಾಜ್ಯದಲ್ಲಿ ಕನ್ನಡ ಕಲಿಯುವ ಆಸಕ್ತರಿಗೆ, ಹೊರನಾಡಿನವರಿಗೆ ಕನ್ನಡ ಕಲಿಕಾ ಕೇಂದ್ರಗಳ ಮೂಲಕ ಕನ್ನಡ ಪ್ರಾಧಿಕಾರ ಕನ್ನಡ ಕಲಿಸುವ ಪ್ರಯತ್ನ ನಡೆಸಿದೆ. ಇದಕ್ಕಾಗಿ ಸರಳವಾದ ಕನ್ನಡದ ಪಠ್ಯಕ್ರಮ ವನ್ನು, ಪಠ್ಯಪುಸ್ತಕವನ್ನೂ ಸಿದ್ಧಪಡಿಸಲಾಗಿದೆ. ಈವರೆಗೆ ಸುಮಾರು 3000 ಮಂದಿಗೆ ಹೀಗೆ ಕನ್ನಡ ಕಲಿಸಲಾಗಿದೆ ಎಂದು ಡಾ.ಬಿಳಿಮಲೆ ವಿವರಿಸಿದರು.
ಪ್ರಾಧಿಕಾರ ಇಂದು-ನಾಳೆ ಉಡುಪಿ ಜಿಲ್ಲೆಯಲ್ಲಿರಲಿದೆ. ತನಗೆ ಈ ಜಿಲ್ಲೆ ಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಮುದ್ದಣ್ಮ, ಕಾರಂತ, ಕುಶಿಯವರ ಜಿಲ್ಲೆ ಇದು. ಉಡುಪಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಸಣ್ಣಪುಟ್ಟ ಕೊರತೆಗಳನ್ನು ಹೊರತು ಪಡಿಸಿ ಪರಿಣಾಮಕಾರಿಯಾಗಿದೆ ಎಂದ ಅವರು ಇಂದು ಬೆಳಗ್ಗೆ ಕಸಾಪ ಸೇರಿದಂತೆ ಜಿಲ್ಲೆಯ 20 ಕನ್ನಡ ಪರ ಸಂಘಟನೆಯ ವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಅವರ ಅಭಿಪ್ರಾಯವನ್ನೂ ಪಡೆದು ಕೊಂಡಿದ್ದೇನೆ ಎಂದರು.
ಜಿಲ್ಲಾಡಳಿತ ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಕನ್ನಡ ಪರ ಸಂಘಟನೆಗಳೊಂದಿಗೆ ಸಭೆ ನಡೆಸಿ ಚರ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಅಲ್ಲದೇ ಕೆಡಿಪಿ ಸಭೆಗಳಲ್ಲೂ ಪ್ರಾಧಿಕಾರದ ಸ್ಥಳೀಯ ಪ್ರತಿನಿಧಿ ಭಾಗವಹಿಸಲು ಅವಕಾಶ ನೀಡಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚರ್ಚಿಸುವಂತೆಯೂ ಅವರಿಗೆ ಸೂಚಿಸಿದ್ದೇನೆ ಎಂದರು.
ಮಣಿಪಾಲದಂಥ ನಗರದಲ್ಲಿ, ಮರವಂತೆ, ಮಲ್ಪೆ, ಸೈಂಟ್ ಮೇರಿಸ್ ದ್ವೀಪದಂಥ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವಂತೆ ಸಲಹೆ ಬಂದಿದೆ. ಇಂಥ ಕಡೆಗಳಲ್ಲಿ ಕನ್ನಡದಲ್ಲಿ ಸೂಕ್ತ ವಿವರಣೆ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ತಿಳಿಸಲಾಗಿದೆ ಎಂದು ಡಾ.ಬಿಳಿಮಲೆ ಹೇಳಿದರು.
ಉಡುಪಿಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾ ಕಸಾಪ ಮುಂದಾಗಿದೆ. ಅದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ದಿಂದ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಎಸೆಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಇಲ್ಲಿ ರಾಜ್ಯದಲ್ಲೇ ಅತ್ಯಂತ ಕಡಿಮೆ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುದು ತಿಳಿದು ಖುಷಿಯಾಗಿದೆ ಎಂದರು.
ರಾಜ್ಯದಲ್ಲಿ ಶತಮಾನೋತ್ಸವ ಕಂಡ 3,300 ಪ್ರಾಥಮಿಕ ಶಾಲೆಗಳಿವೆ. ರಾಜ್ಯದ 17,700 ಸರಕಾರಿ ಶಾಲೆಗಳಿಗೆ ಹಕ್ಕುಪತ್ರಗಳಿಲ್ಲ ಎಂದು ಗೊತ್ತಾಗಿದೆ. ಇವುಗಳಲ್ಲಿ ಉಡುಪಿಯ ಎಂಟು ಶಾಲೆಗಳೂ ಸೇರಿವೆ. ಹಿಂದೆ ಈ ಶಾಲೆಗಳ ನಿರ್ಮಾಣಕ್ಕಾಗಿ ಅನೇಕ ದಾನಿಗಳು 5-10 ಎಕರೆವರೆಗೆ ಜಮೀನುಗಳನ್ನು ದಾನವಾಗಿ ನೀಡಿದ್ದು, ಅವುಗಳಲ್ಲಿ ಶಾಲಾ ಕಟ್ಟಡಗಳ ನಿರ್ಮಾಣವಾಗಿ ಕಳೆದ 35-40 ವರ್ಷಗಳಿಂದ ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಆದರೆ, ಕೆಲವು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ನಿಂತು ಹೋಗಿವೆ. ಶಾಲೆಗೆ ಸಂಬಂದಿಸಿದ ಜಾಗಗಳನ್ನು ಜನಸಾಮಾನ್ಯರು ಒತ್ತುವರಿ ಮಾಡಿಕೊಳ್ಳಲು ಮುಂದಾಗುತಿದ್ದಾರೆ. ಆದ್ದರಿಂದ ದಾನದಿಂದ ಪಡೆದ ಭೂಮಿಯ ದಾಖಲಾತಿಗಳನ್ನು ಸರ್ಕಾರದ ಹೆಸರಿಗೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 8 ಶಾಲೆಗಳ ದಾಖಲೆಗಳು ಸಮರ್ಪಕವಾಗಿ ಆಗದೇ ಇರುವುದು ಕಂಡುಬಂದಿದೆ. ಸೂಕ್ತ ಅಧಿಕೃತ ದಾಖಲಾತಿಗಳನ್ನು ಜಿಲ್ಲಾ ಅಡಳಿತದಿಂದ ಮಾಡಿಕೊಳ್ಳಲು ಕ್ರಮವಹಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಅಪ್ತ ಕಾರ್ಯದರ್ಶಿ ಫಣಿಕುಮಾರ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.







