ವಾರಾಹಿ ಯೋಜನೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ: ಟಿ.ರಘು ಮೂರ್ತಿ

ಉಡುಪಿ, ಮೇ 27: ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಪ್ರತಿದಿನ 45 ಎಂ.ಎಲ್.ಡಿ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಉಡುಪಿ ನಗರಕ್ಕೆ ಪ್ರಸ್ತುತ ಬಜೆ ಹಾಗೂ ಹಾಲಾಡಿಯ ಕೆಎನ್‌ಎನ್‌ಎಲ್ ನಾಲೆಯಿಂದ ತಾತ್ಕಾಲಿಕವಾಗಿ ನೀರು ನೀಡಲಾಗುತ್ತಿದೆ. ಭರತ್ಕಲ್ ಜಾಕ್‌ವೆಲ್‌ನಿಂದ ಹಾಲಾಡಿ ನೀರು ಶುದ್ದೀಕರಣ ಘಟಕದವರೆಗೆ 3 ಕಿ.ಮೀ. ಪೈಪ್‌ಲೈನ್‌ಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿ ಯನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸಬೇಕು ಎಂದುಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಅಧ್ಯಕ್ಷ ಟಿ.ರಘು ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವತಿಯಿಂದ ನಡೆಸಲಾಗುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಾಲಾಡಿ ನೀರು ಶುದ್ದೀಕರಣ ಘಟಕದ ಪಕ್ಕದಲ್ಲಿರುವ ವಾರಾಹಿ ಎಡದಂಡೆ ಕಾಲುವೆ ಮೂಲಕ ಕೆಎನ್‌ಎನ್‌ಎಲ್ ಇಲಾಖೆಯವರು ಕರಾರು ಒಪ್ಪಂದದಂತೆ ಉಡುಪಿ ನಗರ ಹಾಗೂ ಇತರೆ ಗ್ರಾಮಗಳಿಗೆ ಡಿಸೆಂಬರ್ ನಿಂದ ಜೂನ್ ಅಂತ್ಯದವರೆಗೆ ನೀರು ಸರಬರಾಜು ಮಾಡಲಿದ್ದಾರೆ. ಕಾಮಗಾರಿ ಮುಗಿಯುವವರೆಗೆ ವರ್ಷಪೂರ್ತಿ ನೀಡಲು ಜಲ ಸಂಪನ್ಮೂಲ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದ ಅವರು, ಇತರೆ ಯಾವುದೇ ರೀತಿಯ ಸಮಸ್ಯೆ ಗಳಿದ್ದಲ್ಲಿ ಸಮಿತಿಯ ಗಮನಕ್ಕೆ ತರುವಂತೆ ತಿಳಿಸಿದರು.
ಕಾಮಗಾರಿಯ ನಿಳಂಬದಿಂದಾಗಿ ಯೋಜನಾ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆ. ದರ ಪರಿಷ್ಕರಣೆಯಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ವಸ್ತು ಗಳಿಗೆ ಮಾತ್ರ ಹೆಚ್ಚುವರಿ ಅನುದಾನ ನೀಡಲು ಸಾಧ್ಯ. ಕಾಮಗಾರಿ ವಿಳಂಬ ವಾದಾಗ ಹೆಚ್ಚುವರಿ ಅನುದಾನದ ಅವಶ್ಯಕತೆಯು ಉಂಟಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದವರು ನುಡಿದರು.
ಉಡುಪಿ ನಗರ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಯ ಪ್ರಗತಿ ಯಲ್ಲಾಗುತ್ತಿರುವ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತವೆ. ಇವುಗಳನ್ನು ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಿ ಜನತೆಗೆ ಕುಡಿಯುವ ನೀರನ್ನು ಒದಗಿಸಬೇಕು ಎಂದರು.
ಸರಕಾರ ಜನಸಾಮಾನ್ಯರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಅನೇಕ ಯೋಜನೆಗಳು ಹಾಗೂ ಕಾಮಗಾರಿ ಗಳನ್ನು ಕೈಗೊಳ್ಳುತ್ತದೆ. ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ವಿಳಂಬಲ್ಲದೆ ಪೂರ್ಣಗೊಳಿಸಿ, ಜನಸಾಮಾನ್ಯರ ಸದುಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದೂ ಅವರು ಸೂಚಿಸಿದರು.
ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಬಾಕಿ ಇರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಂಡು ಪೂರ್ಣಗೊಳಿಸಬೇಕೆಂದರು.
ಸಮಿತಿಯ ಸದಸ್ಯರಾದ ಐವನ್ ಡಿಸೋಜಾ ಮಾತನಾಡಿ, ಸಾರ್ವಜನಿಕ ರಿಗೆ ಕುಡಿಯುವ ನೀರನ್ನು ಒದಗಿಸುವ ಹಾಗೂ ಒಳಚರಂಡಿ ಕಾಮಗಾರಿ ಗಳನ್ನು ಪೂರ್ಣಗೊಳಿಸಲು 5ರಿಂದ 6 ವರ್ಷ ತೆಗೆದುಕೊಂಡರೆ ಜನರಿಗೆ ಸಮಸ್ಯೆಗಳಾಗುತ್ತವೆ. ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿ, ಅಡಚಣೆ ಗಳನ್ನು ಬಗೆಹರಿಸಿ, ವಿಳಂಬವಾಗ ದಂತೆ ನೋಡಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ 270 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಈ ಹಿಂದೆ 2021ರಲ್ಲಿ 330 ಕೋಟಿ ರೂ. ಅಂದಾಜು ವೆಚ್ಚದ ಯೋಜನಾ ವರದಿಯನ್ನು ಕೆಯುಡಬ್ಲ್ಯೂಎಸ್ ಡಿ.ಬಿ ಮೂಲಕ ತಯಾರಿಸಿ, ನಗರಸಭೆಯ ಮುಖಾಂತರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಗುಡ್ಡಗಾಡು, ತಗ್ಗು ಪ್ರದೇಶವಾದ್ದರಿಂದ ಅಂದಾಜು ವೆಚ್ಚ ಜಾಸ್ತಿ ಇದ್ದ ಕಾರಣ ಅನುಮೋದನೆ ದೊರಕಿರಲಿಲ್ಲ. ಹೊಸದಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿಯ ಗಮನಕ್ಕೆ ತಂದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಎಂ. ಕೃಷ್ಣಪ್ಪ, ಶಾಂತನಗೌಡ ಡಿ.ಜಿ, ಎಸ್. ಮುನಿರಾಜು, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.






