ಕಾಂಕ್ರಿಟೀಕರಣ ಕಾಮಗಾರಿ: ಫೆ.21ರವರೆಗೆ ಮಣಿಪಾಲ-ಪೆರಂಪಳ್ಳಿ ಮಾರ್ಗದ ವಾಹನ ಸಂಚಾರ ಬಂದ್

ಸಾಂದರ್ಭಿಕ ಚಿತ್ರ
ಉಡುಪಿ, ಡಿ.25: ತಾಲೂಕಿನ ಅಂಬಾಗಿಲು-ಮಣಿಪಾಲ-ಉದ್ಯಾವರ- ಮಲ್ಪೆ ಜಿಲ್ಲಾ ಮುಖ್ಯರಸ್ತೆಯಲ್ಲಿ ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ ಬಳಿಯ ಸುಮಾರು 250 ಮೀ.ಉದ್ದದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ನಡೆಸಲು ನಿರ್ಧರಿಸಿರುವುದರಿಂದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಸ್ತೆ)ಯ ವಾಹನ ಸಂಚಾರವನ್ನು 2026ರ ಫೆಬ್ರವರಿ 21ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ನೀಡಿದ ವರದಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಭಿಪ್ರಾಯದಂತೆ ಈ ಮಾರ್ಗದ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಫೆ.21ರವರೆಗೆ ಅಂಬಾಗಿಲು- ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮ- ಸಗ್ರಿನೊಳೆ- ಇಂದ್ರಾಳಿ- ಮಣಿಪಾಲ ರಸ್ತೆ ಮುಖಾಂತರ ಸಂಚರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.





