ಆರೆಸ್ಸೆಸ್ ಚಟುವಟಿಕೆ ನಿಷೇಧ ವಿವಾದ | ಸಿಎಂ ಯೋಗ್ಯ ನಿರ್ಧಾರ ಕೈಗೊಳ್ಳುವ ವಿಶ್ವಾಸ : ಪೇಜಾವರ ಶ್ರೀ

ಉಡುಪಿ : ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಅವರು ಅವರ ಅಭಿಪ್ರಾಯವನ್ನು ಸರಕಾರಕ್ಕೆ ಹೇಳಿದ್ದಾರೆ. ಅವರಿಗೆ ಅವರದ್ದೇ ಅಭಿಪ್ರಾಯ ತಿಳಿಸುವ ಹಕ್ಕು ಖಂಡಿತವಾಗಿ ಇದೆ. ಈ ಕುರಿತು ಮುಖ್ಯಮಂತ್ರಿಗಳು ಎಲ್ಲರ ಜೊತೆ ವಿಮರ್ಶಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ತನ್ನ ಹೆಸರಿನಂತೆ ರಾಷ್ಟ್ರೀಯ ಸೇವೆಯನ್ನು ಮಾಡುತ್ತಿದೆ. ವ್ಯವಸ್ಥೆಯಲ್ಲಿ ಕೆಲವು ತಪ್ಪುಗಳಾಗುವುದು ಸಹಜ. ಆದರೆ ಆ ತಪ್ಪುಗಳು ಇದೆಯೋ ಇಲ್ಲವೋ ಎಂಬುದನ್ನು ವಿಮರ್ಶಿಸಬೇಕು. ಒಬ್ಬರಿಗೆ ಸರಿ ಎಂದು ಕಂಡದ್ದು, ಮತ್ತೊಬ್ಬರಿಗೆ ತಪ್ಪು ಎಂದೆನಿಸಬಹುದು. ತಪ್ಪುಗಳಿದ್ದರೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಆರೆಸ್ಸೆಸ್ ನೂರು ವರ್ಷಗಳಿಂದ ಮಾಡುತ್ತಿರುವ ದೇಶ ಕಾರ್ಯವನ್ನು ಗಮನಿಸಬೇಕು. ಇದರಿಂದ ದೇಶಕ್ಕೆ ಆಗಿರುವ ಲಾಭವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಆರೆಸ್ಸೆಸ್ ಮಾಡಿರುವ ದೇಶ ಸೇವೆ ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಮುಂದೆಯೂ ಆರೆಸ್ಸೆಸ್ ಈ ಸೇವಾ ಕಾರ್ಯವನ್ನು ಮುಂದುವರೆಸುತ್ತದೆ ಎಂದು ಅವರು ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರು ತಮ್ಮ ಅಭಿಪ್ರಾಯವನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಯಾವುದೇ ವ್ಯವಸ್ಥೆಯಲ್ಲಿ ಲೋಪದೋಷಗಳು ಇದ್ದರೆ ಸರಿ ಪಡಿಸಲು ಗಮನ ಹರಿಸಬೇಕು. ಸಮಾಜಕ್ಕೆ ಆಗುವ ಲಾಭವನ್ನು ಗಮನಿಸಬೇಕು. ನೂರು ವರ್ಷ ಪೂರೈಸಿರುವ ಆರೆಸ್ಸೆಸ್ ನಿಷೇಧ ಮಾಡುವುದು ಸರಿಯಲ್ಲ. ಸರಕಾರ ಎಲ್ಲ ವಿಷಯದಲ್ಲೂ ಲಾಭ ನಷ್ಟವನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.
ಅಯೋಧ್ಯೆಯಲ್ಲಿ ತ್ರಿವರ್ಣ ಧ್ವಜಾರೋಹಣ :
ನ.25ರಂದು ಅಯೋಧ್ಯೆಯಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ. ದೇವಾಲಯದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಸಮಾರೋಪ ಕಾರ್ಯಕ್ರಮದಲ್ಲಿ ಮಂದಿರವನ್ನು ರಾಮ ದೇವರಿಗೆ ಅರ್ಪಿಸಲಾಗುತ್ತದೆ. ಧ್ವಜಾರೋಹಣದ ಮೂಲಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಪೇಜಾವರ ಸ್ವಾಮೀಜಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುತ್ತಾರೆ. ಪ್ರಧಾನ ಮಂತ್ರಿಗಳೇ ಧ್ವಜಾರೋಹಣ ಮಾಡುತ್ತಾರೆ. ಅದೇ ರೀತಿ ಪೂರ್ವ ಭಾವಿ ಪೂಜಾ ಕಾರ್ಯಗಳು ನಡೆಯಲಿವೆ ಎಂದು ಅವರು ಹೇಳಿದರು.







