ಸಂವಾದದ ಮೂಲಕ ಸಂಘರ್ಷಕ್ಕೆ ಪರಿಹಾರ ಇಂದಿನ ಅಗತ್ಯ: ಡಾ.ರಾಜಾರಾಮ್ ತೋಳ್ಪಾಡಿ

ಉಡುಪಿ, ಅ.4: ಸಂವಾದದ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡು ಕೊಳ್ಳುವುದು ಇಂದಿನ ಅಗತ್ಯವಾಗಿದೆ. ಇದು ಮಹಾತ್ಮ ಗಾಂಧಿಯವರ ಮಹತ್ವದ ಪುಟ್ಟ ಪುಸ್ತಕ ‘ಹಿಂದ್ ಸ್ವರಾಜ್’ನಲ್ಲಿ ಚೆನ್ನಾಗಿ ಪ್ರತಿಫಲಿಸುತ್ತದೆ ಎಂದು ರಾಜಕೀಯ ಶಾಸ್ತ್ರಜ್ಞ, ಪ್ರಾಧ್ಯಾಪಕ ಡಾ. ರಾಜಾರಾಮ್ ತೋಳ್ಪಾಡಿ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಉಡುಪಿ ರೋಟರಿ ಕ್ಲಬ್ ಮತ್ತು ಯುನೆಸ್ಕೋ ಪೀಸ್ ಚೇರ್ ಸಹಯೋಗದೊಂದಿಗೆ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ದಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ನಾವು ಸಂವಾದವೇ ಸಾಧ್ಯವಿಲ್ಲದ ಜಗತ್ತಿನಲ್ಲಿ ಬದುಕುತಿದ್ದೇವೆ. ಈ ಕಾರಣದಿಂದಲೇ ಹಿಂದ್ ಸ್ವರಾಜ್ ಕೃತಿಯಲ್ಲಿ ಗಾಂಧೀಜಿ ಪ್ರತಿಪಾದಿಸಿದ ಸಂವಾದದ ವಿಧಾನ ಸಮಕಾಲೀನ ಅಗತ್ಯತೆಯಾಗಿದೆ ಎಂದು ಅವರು ಹೇಳಿದರು.
ಹಿಂದ್ ಸ್ವರಾಜ್, ಓದುಗ ಮತ್ತು ಸಂಪಾದಕನ ನಡುವಿನ ಸಂಕೀರ್ಣ ಪ್ರಶ್ನೆಗಳನ್ನೊಳಗೊಂಡ ಸಂವಾದದ ಮಾದರಿಯನ್ನು ಅಳವಡಿಸಿಕೊಂಡಿದೆ ಎಂದು ಡಾ.ತೋಳ್ಪಾಡಿ ನುಡಿದರು.
‘ಹಿಂದ್ ಸ್ವರಾಜ್’ನಲ್ಲಿ ಮಹಾತ್ಮಾ ಗಾಂಧಿಯವರು ಆಧುನಿಕ ನಾಗರಿಕತೆಗೆ ಪರ್ಯಾಯವನ್ನು ಕಲ್ಪಿಸಲು ಪ್ರಯತ್ನಿಸಿದ್ದರು. ಸತ್ಯ, ಅಹಿಂಸೆ ಮತ್ತು ಸ್ವರಾಜ್ಯ ಎಂಬ ಅವರ ಕಲ್ಪನೆಗಳ ಮೇಲೆ ನಾಗರಿಕತೆಯನ್ನು ನಿರ್ಮಿಸುವ ಪ್ರಯತ್ನ ಅದಾಗಿತ್ತು. ಈ ಮೂರು ಪರಿಕಲ್ಪನೆಗಳು ಅವರ ವಿಸ್ತಾರವಾಗುತ್ತಿರುವ ತಾತ್ವಿಕ ನಿಲುವುಗಳು ಮತ್ತು ಈ ಬಗೆಯ ಪರ್ಯಾಯ ನಾಗರಿ ಕತೆ ಕೇವಲ ಭಾರತದ ವಿಮೋಚನೆಯಲ್ಲ ಮಾತ್ರವಲ್ಲ, ಬದಲಾಗಿ ಇಂಗ್ಲೆಂಡ್ ಸಹ ಸೇರಿದಂತೆ ಇಡೀ ಮಾನವಕುಲದ ವಿಮೋಚನೆ ಎಂದು ಗಾಂಧೀಜಿ ಭಾವಿಸಿದ್ದರು ಎಂದು ಡಾ. ತೋಳ್ಪಾಡಿ ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಭಾರತದ ಆತ್ಮವು ಅದರ ‘ಬಹುತ್ವ ಮತ್ತು ವಿವಿಧತೆಯಲ್ಲಿ ಏಕತೆ’ ಎಂಬ ತತ್ವದಲ್ಲಿ ನೆಲೆಸಿದೆ ಎಂದರು.
ಹಿರಿಯ ರೋಟರಿಯನ್ನರಾದ ಚಂದ್ರಶೇಖರ ಅಡಿಗ, ದೀಪಾ ಭಂಡಾರಿ ಮತ್ತು ಸುಬ್ರಹ್ಮಣ್ಯ ಬಾಸ್ರಿ ಅವರು ವಿಶ್ವಶಾಂತಿಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಗಾಂಧಿ ತತ್ವ, ವಿಶ್ವಶಾಂತಿ ಮತ್ತು ರೋಟರಿ ಇಂಟರ್‌ನೇಷನಲ್ ಚಟುವಟಿಕೆಗಳ ನಡುವಿನ ಸಂಬಂಧವನ್ನು ವಿವರಿಸಿದರು.
ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಗಾಂಧೀಜಿ ಅವರು ‘ದೇವರೇ ಸತ್ಯ’ ಎಂಬಲ್ಲಿಂದ ‘ಸತ್ಯವೇ ದೇವರು’ ತತ್ವದೆಡೆಗೆ ಹೇಗೆ ಸಾಗಿದರು ಎಂಬುದನ್ನು ವಿವರಿಸಿದರು. ಮಣಿಪಾಲ ಎಂಐಟಿ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೌಸ್ತುಭ ಶೆಟ್ಟಿ ವಂದಿಸಿದರು, ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಜಿಸಿಪಿಎಎಸ್‌ನ ವಿದ್ಯಾರ್ಥಿಗಳಾದ ಶ್ರಾವ್ಯ ಬಾಸ್ರಿ ಮತ್ತು ತಂಡದ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಇದೇ ಸಂದರ್ಭದಲ್ಲಿ ಭೂಮಿಗೀತಾ ತಂಡ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ಗಾಂಧೀಜಿಯವರ ಜೀವನದ ಕುರಿತಾದ ಚಿಂತನಶೀಲ ನಾಟಕ ‘ಹೇ ರಾಮ್’ ಪ್ರದರ್ಶನಗೊಂಡಿತು.
ಈ ನಾಟಕವು ಗಾಂಧೀಜಿಯವರ ಕುರಿತಾದ ಅನೇಕ ನಾಟಕಗಳ ಸಂಕಲನವಾಗಿದೆ, ಡಾ.ಬಿ.ಆರ್ ಅಂಬೇಡ್ಕರ್, ಮಗ ಹರಿಲಾಲ್, ಪತ್ನಿ ಕಸ್ತೂರಬಾ, ಹಿಂದೂ-ಮುಸ್ಲಿಂ ಪ್ರಶ್ನೆ ಇತ್ಯಾದಿ ಮಹತ್ವದ ಪ್ರಶ್ನೆಗಳೊಂದಿಗೆ ಗಾಂಧೀಜಿಯವರ ತಾತ್ವಿಕ ಮುಖಾಮುಖಿಯನ್ನು ನಾಟಕ ಬಿಂಬಿಸುತ್ತದೆ.







