ದಿಲ್ಲಿ ವಿದ್ಯಾರ್ಥಿ ಪ್ರತಿಭಟನಕಾರರ ಮೇಲೆ ಪೊಲೀಸ್ ದೌರ್ಜನ್ಯ: ಕಾಂಗ್ರೆಸ್ ಖಂಡನೆ

ಉಡುಪಿ, ಜು.20: ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಗ್ಗೆ ಕೇಂದ್ರ ಶಿಕ್ಷಣ ಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಗ್ರವಾಗಿ ಖಂಡಿಸಿದೆ.
ಇದು ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ಈಗಾಗಲೇ 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರೂ ಈ ಲೋಪದ ಹೊಣೆಯನ್ನು ಕೇಂದ್ರ ಹೊರಲು ಸಿದ್ಧವಿಲ್ಲ. ಪ್ರಶ್ನೆ ಪತ್ರಿಕೆಯನ್ನು ಹಲವಾರು ಜನರು ಹಣ ಪಾವತಿಸಿ ಖರೀದಿಸಿರು ವುದನ್ನು ನ್ಯಾಯಾಲಯಕ್ಕೆ ಸಿಬಿಐ ಈಗಾಗಲೆ ಮಾಹಿತಿ ನೀಡಿದೆ. ಬಿಜೆಪಿ ಬೆಂಬಲಿತರೆ ಈ ಕೃತ್ಯದಲ್ಲಿ ಭಾಗಿಯಾಗಿ ದ್ದಾರೆ ಎಂಬ ಸಂಶಯಕ್ಕೆ ಕೇಂದ್ರದ ನಡೆ ಇಂಬು ಕೊಡುತ್ತದೆ. ಆದ್ದರಿಂದ ಜನರ ಸಂಶಯವನ್ನು ನಿವಾರಿಸುವುದು ಕೇಂದ್ರದ ಕರ್ತವ್ಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ನೀಡಿದೆ. ಜನರ ಧ್ವನಿಯನ್ನು ಆಲಿಸುವ ಬದಲು ಬಲಪ್ರಯೋಗದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಪ್ರಹಾರ ಹಾಗೂ ದೌರ್ಜನ್ಯವನ್ನು ಕುಂದಾಪುರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಇದೊಂದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದ ನಡೆ ಎಂದು ಹೇಳಿದ್ದಾರೆ.






