ಹಾಲು ಉತ್ಪಾದಕರ ಸಂಘ ಸದಸ್ಯರಿಗೂ ಕಡಿಮೆ ಬಡ್ಡಿಯ ಸಾಲಕ್ಕೆ ಚಿಂತನೆ: ರಾಜೇಂದ್ರಕುಮಾರ್
ದ.ಕ.ಸಹಕಾರಿ ಹಾಲು ಉತ್ರಾದಕರ ಒಕ್ಕೂಟದ ನಿರ್ದೇಶಕರಿಗೆ ಸನ್ಮಾನ

ಉಡುಪಿ: ಹೈನುಗಾರರಿಗೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೂ ಸ್ವಸಹಾಯ ಸಂಘಗಳ ಸದಸ್ಯರಿಗಿರುವಂತೆ ಕಡಿಮೆ ಬಡ್ಡಿಯಲ್ಲಿ ಸಾಲಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗು ವುದು ಎಂದು ಮಂಗಳೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ಎನ್.ಎಂ.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಹೈನುಗಾರ ಪರಿವಾರ ಒಕ್ಕೂಟದ ವತಿಯಿಂದ ಶನಿವಾರ ಅಜ್ಜರಕಾಡಿನ ಪುರಭವನ ದಲ್ಲಿ ನಡೆದ ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡ ಳಿಯ ಸದಸ್ಯರಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಎಂಟು ಮಂದಿ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡುತಿದ್ದರು.
ಇದರೊಂದಿಗೆ ಹೈನುಗಾರರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಹೊಸ ಖರೀದಿಸಲು ಸ್ವಸಹಾಯ ಸಂಘದ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುವುದು ಎಂದೂ ಅವರು ಭರವಸೆ ನೀಡಿದರು.
ಇದರೊಂದಿಗೆ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಹಾಗೂ ಒಕ್ಕೂಟದ ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸಲು ಸಹ ಚಿಂತಿಸಬೇಕಿದೆ. ಇದಕ್ಕೆ ಡಿಸಿಸಿ ಬ್ಯಾಂಕಿನ ವತಿಯಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಅವರು ಘೋಷಿಸಿದರು.
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಇಂದು ಹಾಲು ಉತ್ಪಾದನೆಯ ವೆಚ್ಚ ಹೆಚ್ಚಿದೆ. ಹುಲ್ಲು ಹಾಗೂ ಪಶುವಿನ ಆಹಾರದ ವೆಚ್ಚವೂ ಹೆಚ್ಚಿದೆ. ಹೀಗಾಗಿ ಸರಕಾರ ಹಾಲು ಉತ್ಪಾದಕರ ಸಂಘಗಳಿಗೆ ಹೆಚ್ಚಿನ ನೆರವು ನೀಡಬೇಕಿದೆ. ಇದರೊಂದಿಗೆ ಹಾಲು ಉತ್ಪಾದಕರಿಗೂ ಹೆಚ್ಚುವರಿ ಪೋತ್ಸಾಹಧನ ಸಿಗಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ದೈನಂದಿನ ಹಾಲು ಸಂಗ್ರಹದಲ್ಲಿ 60 ರಿಂದ 70 ಸಾವಿರ ಲೀ.ನಷ್ಟು ಹೆಚ್ಚಳ ಕಂಡುಬಂದಿರುವುದು ಸಂತೋಷದ ಸಂಗತಿ. ಜಿಲ್ಲೆಯ ಒಟ್ಟಾರೆ ಹಾಲಿನ ಉತ್ಪಾದನೆ ನಾಲ್ಕು ಲಕ್ಷ ಲೀ.ನಷ್ಟಿದ್ದು, ಇದು ಆರು ಲಕ್ಷ ಲೀ.ಗೆ ಏರಿಸಿದರೆ ಆಗ ಸಂಘ ಲಾಭದಲ್ಲಿ ನಡೆಯುತ್ತದೆ. ಇದಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದರು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಒಕ್ಕೂಟದ ಹಾಲಿನ ಸಂಗ್ರಹದ ಪ್ರಮಾಣ ಹೆಚ್ಚಿದರೆ, ಮಹಾಮಂಡಳ ಒಪ್ಪಿಗೆ ನೀಡಿದರೆ ಹಾಲಿನ ಉತ್ಪಾದಕರಿಗೆ ಎರಡು ರೂ.ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಹಾಗೂ ನಮ್ಮ ಇನ್ನಿತರ ಯೋಜನೆಗಳನ್ನು ಜಾರಿಗೆ ತರಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಆಡಳಿತ ಮಂಡಳಿ ಕೆಲಸ ಮಾಡಲಿದೆ ಎಂದರು.
ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘಗಳು ಇನ್ನಷ್ಟು ಬಲಿಷ್ಠಗೊಳ್ಳಬೇಕು. ದೈನಂದಿನ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಬೇಕು. ಪ್ರತಿ ಸಂಘ ೫೦೦ರಿಂದ ೬೦೦ಲೀ. ಹಾಲು ನೀಡುವಂತಾಗಬೇಕು ಎಂದು ರವಿರಾಜ ಹೆಗ್ಡೆ, ಆಗ ಮಾರ್ಜಿನ್ ದರ ಹೆಚ್ಚಿಸಲು ಚಿಂತನೆ ನಡೆಸಲಾಗುವುದು ಹಾಗೂ ಈಗಿರುವ ಯೋಜನೆಗಳೊಂದಿಗೆ ಇನ್ನಷ್ಟು ಹೊಸ ಯೋಜನೆ ಜಾರಿಗೆ ತರಲಾಗುವುದು ಎಂದು ನುಡಿದರು.
ಒಕ್ಕೂಟದ ವತಿಯಿಂದ ಹೈನುಗಾರರಿಗೆ ಈರೋಡಿನಿಂದ ದನಗಳನ್ನು ತರುವ ಯೋಜನೆ ಹಾಕಿಕೊಳ್ಳ ಲಾಗಿದೆ. ಶೀಘ್ರವೇ ಸಾಕಷ್ಟು ದನಗಳು ಜಿಲ್ಲೆಗೆ ಬರಲಿವೆ ಎಂದ ಹೆಗ್ಡೆ, ಈ ಹಸುಗಳು ಅಲ್ಲಿನಷ್ಟೇ ಹಾಲು ನೀಡಲು ರಸಮೇವನ್ನು ನೀಡಬೇಕು. ರಸಮೇವಿನ ಸರಬರಾಜಿಗೂ ಕ್ರಮ ವಹಿಸಲಾಗುವುದು ಎಂದರು.
ಸಮಾರಂಭದಲ್ಲಿ ಉಡುಪಿ ಜಿಲ್ಲೆಯಿಂದ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾದ್ಯಕ್ಷ ಉದಯ ಕೋಟ್ಯಾನ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಸುಧಾಕರ ಶೆಟ್ಟಿ ಕಾರ್ಕಳ, ಮಮತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪರಿವಾರ ಒಕ್ಕೂಟದ ವತಿಯಿಂದ ಡಾ.ರಾಜೇಂದ್ರ ಕುಮಾರ್ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹೈನುಗಾರ ಪರಿವಾರ ಒಕ್ಕೂಟದ ಜಗದೀಶ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಪಿ. ವಂದಿಸಿದರು.
ದನ ಸಾಕಿದವರು ಮಾತ್ರ ನಿರ್ದೇಶಕರಾಗಿ: ಕಾರಂತ
ಇಂದು ದನ ಸಾಕಿ ಗೊತ್ತಿಲ್ಲದವರು, ಹೈನುಗಾರರಲ್ಲದವರು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗುತಿದ್ದಾರೆ. ಹಾಲು ಹಾಕದವರು, ಗ್ರಾಹಕರು ಸಹ ಸದಸ್ಯರಾಗುತಿದ್ದಾರೆ. ಇದು ತಪ್ಪಬೇಕು. ಒಕ್ಕೂಟದವರು ಮುಖ ನೋಡಿ ಮಣೆ ಹಾಕಬೇಡಿ ಎಂದು ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಹೈನುಗಾರ ಜಗದೀಶ ಕಾರಂತ ಕಟುವಾಗಿ ನುಡಿದರು.
ಒಕ್ಕೂಟದಲ್ಲಿ, ಹೈನುಗಾರಿಕೆಯಲ್ಲಿ ರಾಜಕೀಯ ಮಾಡಬೇಡಿ. ಸ್ವತಹ ಹೈನುಗಾರರಾಗಿ ಹೈನುಗಾರಿಕೆ ಕಷ್ಟಸುಖ ಗೊತ್ತಿದ್ದವರು, ಕೆಲಸ ಮಾಡು ವವರು ಮಾತ್ರ ನಿಮ್ಮ ಸಾಮರ್ಥ್ಯ ತೋರಿಸಿ. ಈ ಬಗ್ಗೆ ಎಚ್ಚರ ಹೇಳಲು ಹೈನುಗಾರರ ಪರಿವಾರ ಒಕ್ಕೂಟ ರಚಿಸಿದ್ದೇವೆ. ನಾವು ನಿಮ್ಮ ವಿರುದ್ಧ ಹೋರಾಟಕ್ಕಿಳಿಯು ವಂತೆ ಮಾಡಬೇಡಿ. ಹಾಲು ಉತ್ಪಾದಕರಿಗೆ ಹಿಂದಿನಂತೆ ೨ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಎಂದು ಆಗ್ರಹಿಸಿದರು.







