ಜಾಗೃತ ನಾಗರಿಕರಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ: ಡಾ.ಜಯಪ್ರಕಾಶ್ ಶೆಟ್ಟಿ

ಉಡುಪಿ: ಜಾಗೃತ ನಾಗರಿಕ ಮಾತ್ರ ನಮ್ಮ ದೇಶ ಮತ್ತು ಸಂವಿಧಾನ ವನ್ನು ಉಳಿಸಲು ಸಾಧ್ಯವಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಶ್ರೀಸಾಮಾನ್ಯರ ಆಯೋಗ ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ಜಂಟಿ ಆಶ್ರಯದಲ್ಲಿ ರವಿವಾರ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಲಾದ ಶ್ರೀಸಾಮಾನ್ಯರ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಂವಿಧಾನ ಭಾರತದ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರು ವಂತದ್ದಾಗಿದ್ದು ಇಲ್ಲಿ ವಿವಿಧ ಧರ್ಮ, ಭಾಷೆ, ಜಾತಿಯ ಎಲ್ಲ ಜನರನ್ನು ಒಳಗೊಳ್ಳುತ್ತೇವೆ. ಇಂದು ವಿವಿಧ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದು ಒಳ್ಳೆಯವರ ಮೌನವೇ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಎಲ್ಲಿಯಾದರು ಅನ್ಯಾಯ ಕಂಡು ಬಂದಾಗ ದನಿ ಎತ್ತುವುದು ಪ್ರತಿ ಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಒಂದು ವೇಳೆ ಅದನ್ನು ನಾವು ಮಾಡದೇ ಇದ್ದಲ್ಲಿ ಮುಂದೆ ನಮಗೆ ಅನ್ಯಾಯ ವಾದಾಗ ಯಾರೂ ಇರುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಶ್ರೀಸಾಮಾನ್ಯರ ಆಯೋಗ ಮತ್ತು ಕಥೊಲಿಕ್ ಸಭಾ ಸಂಘಟನೆಗಳು ಎರಡನೇ ಸಾಲಿನ ನಾಯಕತ್ವವನ್ನು ಬೆಳೆಸುವುದರೊಂದಿಗೆ ಮುಂಬರುವ ಚುನಾವಣೆಗಳಿಗೆ ಸಿದ್ದರಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.
ನ್ಯಾಯವಾದಿ ಮೆಲ್ವಿನ್ ಡಿಸೋಜ ಶಿರ್ವ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರೆ, ಶ್ರೀಸಾಮಾನ್ಯರ ಆಯೋಗದ ಆಧ್ಯಾತ್ಮಿಕ ನಿರ್ದೇಶಕ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಆಯೋಗದ ಉದ್ದೇಶ ಗಳನ್ನು ವಿವರಿಸಿದರು. ಕೆಥೊಲಿಕ್ ಶಿಕ್ಷಣ ಸೊಸೈಟಿ ನಿರ್ದೇಶಕ ವಂ ವಿನ್ಸೆಂಟ್ ಕ್ರಾಸ್ತಾ ಕಥೊಲಿಕ್ ಮಾತನಾಡಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ಶ್ರೀಸಾಮಾನ್ಯರ ಆಯೋಗದ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ, ಕಥೊಲಿಕ್ ಸಭಾ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ಗುಂಪು ಚರ್ಚೆಯ ಮೂಲಕ ಮುಂದಿನ ಕ್ರಿಯಾ ಯೋಜನೆಯ ಸಿದ್ದಪಡಿಸಲು ಸಹಕರಿಸಿದರು. ಕಾರ್ಯಕ್ರಮದ ಸಂಚಾಲಕ ಮೇರಿ ಡಿಸೋಜ ಸ್ವಾಗತಿಸಿದರು. ಕಥೊಲಿಕ್ ಸಭಾ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಐರಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.







