ಬಡಗಬೆಟ್ಟು ಸೊಸೈಟಿಯಿಂದ ಗ್ರಾಹಕರ ಸಮಾವೇಶ

ಉಡುಪಿ, ಫೆ.1: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗ್ರಾಹಕರ ಸಮಾವೇಶವನ್ನು ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗುವಂತೆ ಬೆಳೆದುನಿಂತಿದೆ. ಇಲ್ಲಿನ ಹಿರಿಯ ಸಹಕಾರಿಗಳ ಚಿಂತನೆ, ಕಲ್ಪನೆಯಿಂದ ಇಡೀ ದೇಶದ ಸಹಕಾರಿ ಕ್ಷೇತ್ರಕ್ಕೆ ಅನುಕೂಲವಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ, ನೌಕರರು ಹಾಗೂ ಗ್ರಾಹಕರು ಒಂದಾಗಿ ಕೆಲಸ ಮಾಡಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಮಣಿಪಾಲ ಮಾಹೆ ನೀಡುವ ಹೊಸವರ್ಷದ ಪ್ರಶಸ್ತಿ ಪುರಸ್ಕೃತ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಇಚ್ಛಾಶಕ್ತಿ ಅತೀ ಅಗತ್ಯ. ಜಿಲ್ಲೆಯ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಇಲ್ಲವಾಗಿಸಲಾಗಿದೆ. ಆ ಸ್ಥಾನವನ್ನು ಸಹಕಾರಿ ಸಂಸ್ಥೆಗಳು ತುಂಬಬೇಕು. ಗ್ರಾಹಕರಿಗೆ ಕಡಿಮೆ ಬಡ್ಡಿದರ ದಲ್ಲಿ ಸಾಲ ನೀಡುವಂತಹ ಆಗಬೇಕು ಎಂದು ತಿಳಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸಾಮ್ಯುವಲ್, ನಿರ್ದೇಶಕರಾದ ಸಂಜೀವ ಕಾಂಚನ್, ಎಲ್.ಉಮಾನಾಥ, ಪುರುಷೋತ್ತಮ ಪಿ.ಶೆಟ್ಟಿ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್.ಭಟ್, ಮನೋಹರ್ ಎಸ್.ಶೆಟ್ಟಿ, ವಿನಯ ಕುಮಾರ್ ಟಿ.ಎ., ಪದ್ಮನಾಭ ನಾಯಕ್, ಸದಾಶಿವ ನಾಕ್ ಉಪಸ್ಥಿತರಿದ್ದರು.
ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ವಂದಿಸಿದರು. ದಯಾನಂದ ಕರ್ಕೇರ ಹಾಗೂ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸಿಬಂದಿಯಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ ನಾಟ್ಯ ವೈಭವ, ಸಂಗೀತ ಕಾರ್ಯಕ್ರಮ, ಬೈಲೂರು ನೃತ್ಯ ನೂಪುರ ಡ್ಯಾನ್ಸ್ ಅಕಾಡೆಮಿಯ ನೃತ್ಯ ಕಾರ್ಯಕ್ರಮ, ಬಡಗುತಿಟ್ಟಿನ ಕಲಾವಿದರಿಂದ ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು.







