ಮುಂದುವರೆದ ಕೊರಗರ ಧರಣಿ: ಅಲ್ಪಸಂಖ್ಯಾತರ ವೇದಿಕೆ ಬೆಂಬಲ

ಉಡುಪಿ, ಜ.8: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 25ನೆ ದಿನವಾದ ಗುರುವಾರವೂ ಮುಂದುವರೆದಿದೆ.
ಕೊರಗ ಸಮುದಾಯ ಈ ನ್ಯಾಯಯುತ ಬೇಡಿಕೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ನಿಯೋಗ ಧರಣಿ ಸ್ಥಳಕ್ಕೆ ಭೇಟಿ ನೀಡಿತು. ಕೊರಗ ಸಮುದಾಯ ಜನಸಂಖ್ಯೆ ದಿನದಿಂದ ದಿನಕ್ಕೆ ತಮ್ಮ ಸಮುದಾಯ ನಶಿಸಿ ಹೋಗುತ್ತಿದ್ದು, ಈಗ ಕೇವಲ 14,000 ಜನಸಂಖ್ಯೆ ಮಾತ್ರ ಉಳಿದಿದೆ. ಇದಕ್ಕೆ ಕಾರಣ ಆ ಸಮುದಾಯದ ವರಿಗೆ ಯಾವುದೇ ರೀತಿಯ ಉತ್ತಮ ದರ್ಜೆಯ ಉದ್ಯೋಗ ಇಲ್ಲದೆ ಇರುವುದು. ಪದವಿ ಮಾಡಿದವರು ಕೂಡ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದು, ಕುಡಿಯುವ ದುಶ್ಚಟಕ್ಕೆ ಬಲಿಯಾಗಿ 35-40 ವರ್ಷ ದಲ್ಲಿಯೇ ಅನಾರೋಗ್ಯಪೀಡಿತರಾಗಿ ಸಾಯುತ್ತಿರುವುದಾಗಿ ಕೊರಗ ಮುಖಂಡರು ನಿಯೋಗಕ್ಕೆ ತಿಳಿಸಿದರು.
ಅದಕ್ಕಾಗಿ ಹಲವು ವರ್ಷಗಳಿಂದ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗ ನೇರ ನೇಮಕಾತಿಯಿಂದ ನೀಡುವ ಬೇಡಿಕೆ ಸಲ್ಲಿಸಿದ್ದೇವೆ. ಸರಕಾರದ ಹಿರಿಯ ನಾಯಕರು ಕೇವಲ ಮನವಿ ಪಡೆದು ಭರವಸೆ ಮಾತ್ರ ನೀಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಇಲ್ಲಿ ಧರಣಿ ಮಾಡುತ್ತಿದ್ದೇವೆ ಎಂದು ಮುಖಂಡರು ನಿಯೋಗಕ್ಕೆ ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್ ಮಾತನಾಡಿ, ನಮ್ಮ ವೇದಿಕೆ ಸಂಪೂರ್ಣವಾಗಿ ತಮಗೆ ಬೆಂಬಲ ನೀಡುತ್ತದೆ ಮತ್ತು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾವು ಸಹ ಮನವಿ ನಿಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವೇದಿಕೆಯ ಕಾರ್ಯದರ್ಶಿ ಝಫರುಲ್ಲಾ ಟಿ.ಎಂ. ಹೂಡೆ, ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಹುಸೈನ್ ಕಟಪಾಡಿ, ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ, ಉಪಾಧ್ಯಕ್ಷೆ ಶಾಂತಿ ಪಿರೇರಾ, ಮೇರಿ ಡಿಸೋಜ, ಗ್ಲಾಡ್ನನ್ ಕರ್ಕಡ ಮೊದಲಾದವರು ಉಪಸ್ಥಿತರಿದ್ದರು.







