ವೆನೆಜುವೆಲಾ ಮೇಲಿನ ಅಮೇರಿಕಾ ದಾಳಿ ಖಂಡಿಸಿ ಸಿಪಿಎಂ ಪ್ರತಿಭಟನೆ

ಕುಂದಾಪುರ, ಜ.4: ಸಾಮ್ರಾಜ್ಯಶಾಹಿ ಅಮೆರಿಕಾ ಸಮಾಜವಾದಿ ಸುಳ್ಳು ಆರೋಪಗಳನ್ನು ಹೊರಿಸಿ ಸಾರ್ವಭೌಮ ರಾಷ್ಟ್ರವಾಗಿರುವ ವೆನೆಜುವೆಲಾ ದೇಶದ ಮೇಲೆ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೆನೆಜುವೆಲಾ ಮೇಲಿನ ಅಮೇರಿಕಾ ದಾಳಿಯನ್ನು ಖಂಡಿಸಿ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ವೆನೆಜುವೆಲಾ ದೇಶದಲ್ಲಿನ ತೈಲ ಸಂಪತ್ತನ್ನು ಲೂಟಿ ಹೊಡೆಯಲು ಅಮೆರಿಕಾದ ಸಂಚಿನ ಭಾಗವಾಗಿ ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದೆ. ಇದನ್ನು ಶಾಂತಿ ಬಯಸುವ ಎಲ್ಲರೂ ವಿರೋಧಿಸಬೇಕು ಎಂದು ಅವರು ತಿಳಿಸಿದರು.
ಯುದ್ದದಾಹಿ, ದರೋಡೆಕೋರ ನೀತಿಯ ಅಮೆರಿಕಾ ಅಧ್ಯಕ್ಷ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಸಮಾಜವಾದಿ ವೆನೆಜುವೆಲಾ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ. ಕೂಡಲೇ ವೆನೆಜುವೆಲಾ ಅಧ್ಯಕ್ಷರು ಹಾಗೂ ಅವರ ಪತ್ನಿ ಬಿಡುಗಡೆ ಮಾಡಬೇಕು. ಭಾರತ ಸರಕಾರ ಅಮೆರಿಕಾದ ಗೊಡ್ಡು ಬೆದರಿಕೆಗೆ ಮಣಿಯದೇ ವೆನೆಜುವೆಲಾ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ ಮಾತನಾಡಿ, ಅಮೇರಿಕಾದ ಅಧ್ಯಕ್ಷ ಟ್ರಂಪ್ ನೀತಿಗಳು ಭಾರತ ದೇಶದ ದುಡಿಯುವ ವರ್ಗದ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜಗತ್ತಿನಲ್ಲಿ ಉಕ್ರೇನ್, ರಷ್ಯಾ ಹಾಗೂ ಇಸ್ರೇಲ್ ಪ್ಯಾಲೇಸ್ಟನ್ ಮೇಲೆ ನಡೆಸುತ್ತಿರುವ ದಾಳಿ ಸಾಮ್ರಾಜ್ಯಶಾಹಿ ಅಮೇರಿಕವೇ ನಡೆಸುತ್ತಿದೆ. ಮುಂದೆ ಭಾರತ ಅಮೆರಿಕಾದ ಷರತ್ತುಗಳಿಗೆ ಒಪ್ಪದಿದ್ದರೆ ನಮ್ಮ ದೇಶದ ಮೇಲೂ ದಾಳಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಶೀಲಾವತಿ, ಬಲ್ಕೀಸ್, ಕುಂದಾಪುರ ತಾಲೂಕು ಸಮಿತಿ ಸದಸ್ಯ ಚಿಕ್ಕ ಮೊಗವೀರ, ಮುಖಂಡರಾದ ಸಂತೋಷ್ ಹೆಮ್ಮಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.







