ಪ್ರಭುತ್ವದಿಂದ ದೇಶದ ಸೃಜನಶೀಲತೆ ಹಾಳು: ಡಾ.ಪುರುಷೋತ್ತಮ ಬಿಳಿಮಲೆ
ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಅಧಿವೇಶನ

ಕುಂದಾಪುರ, ಡಿ.16: ಸೃಜನಶೀಲ ಪ್ರಕ್ರಿಯೆ ಭಾರತದ ಸಾಂಸ್ಕೃತಿಕ ಲೋಕವಾಗಿದೆ. ಆದರೆ ಪ್ರಭುತ್ವವು ಭಾರತದ ಸೃಜನಶೀಲತೆಯ ಮೇಲೆ ದಾಳಿ ನಡೆಸಿ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಅಗತ್ಯ. ಶೇಣಿಕೃತ ಸಮಾಜ ಹಾಗೂ ಅಸಮಾನತೆ ಪ್ರತಿಪಾದಿಸುವ ವ್ಯವಸ್ಥೆಯನ್ನು ಪ್ರತಿಯೊಬ್ಬರು ದಿಕ್ಕರಿಸಬೇಕಾಗಿದೆ ಎಂದು ಹೊಸದಿಲ್ಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟಿದ್ದಾರೆ.
ಬಸ್ರೂರು ಮೂರುಕೈ ಸಮೀಪದ ಆಶೀರ್ವಾದ ಸಭಾಂಗಣದಲ್ಲಿ ಶನಿವಾರ ನಡೆದ ಎರಡು ದಿನಗಳ ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನ ’ಘನತೆಯ ಬದುಕು ಸಾಂಸ್ಕೃತಿಕ ಮಧ್ಯಪ್ರದೇಶ’ದ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡುತಿದ್ದರು.
ಭಾರತದದಲ್ಲಿ ಬೇರೆ ಯಾವ ಕಾಲದಲ್ಲಿಯೂ ಧರ್ಮ ಇಷ್ಟು ಅಪವಿತ್ರ ಗೊಂಡಿರಲಿಲ್ಲ ಧರ್ಮ ಇಂದು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಶಿಕ್ಷಣವು ಸ್ನೇಹ - ಸೌಹಾರ್ದತೆ ಕಲಿಸುತ್ತದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಸಾಂಸ್ಕೃತಿಕ ಪತನ ಜೋರಾಗಿ ನಡೆಯುತ್ತಿದ್ದು ಪ್ರಪಂಚ ತೀವ್ರ ಬಿಕ್ಕಟ್ಟಿನಲ್ಲಿರುವ ಇಂತಹ ಕಾಲ ಘಟ್ಟದಲ್ಲಿ ಸಾಂಸ್ಕೃತಿಕ ಲೋಕದಲ್ಲಿರುವ ನಾವು ಎಚ್ಚೆತ್ತುಕೊಂಡು ಹೊಸ ತಲೆಮಾರಿಗೂ ಜವಬ್ದಾರಿ ನೀಡಬೇಕು ಎಂದರು.
ಇಡೀ ಕನ್ನಡ ಸಾಹಿತ್ಯ ಪ್ರಭುತ್ವದ ವಿರುದ್ಧ ಸಿಡಿದು ನಿಂತಾಗ ಅತ್ಯತ್ತಮ ವಾದುದನ್ನು ಸೃಷ್ಟಿಸಲು ಸಾಧ್ಯವಾಯಿತು. ಪ್ರಭುತ್ವ ದಿಕ್ಕರಿಸುವ ನಮ್ಮ ಪಾರಂಪರಿಕ ಶಕ್ತಿ ಗೌಣವಾಗುತ್ತಿದೆ. ವಿಕೃತ ರಾಷ್ಟ್ರೀಯತೆ ಬೇಡ. ಕರಾವಳಿ ಸಹಿತ ದೇಶ, ಪ್ರಪಂಚದೆಲ್ಲೆಡೆ ಪ್ರಭುತ್ವ ದಿಕ್ಕರಿಸುವ ಶಕ್ತಿಯನ್ನು ನಾಶಮಾಡುವ ಹಂತಕ್ಕೆ ವ್ಯವಸ್ಥೆ ಬೆಳೆದಿರುವುದು ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಬಿಳಿಯಾನೆಗಳ ಬಟ್ಟಲು: ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾಜಾರಾಂ ತಲ್ಲೂರು ಮಾತನಾಡಿ, ಕರಾವಳಿಯಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೂ ಹಿಂದಿನ ಚಿತ್ರಣಕ್ಕೂ ಇಂದಿನ ವಾಸ್ತವಕ್ಕೂ ಬಹಳಷ್ಟು ಬದಲಾವಣೆಯಾಗಿರುವುದು ಗಂಭೀರ ವಿಚಾರ. ನಮ್ಮದಾಗಿದ್ದ ನೆಲ, ಜಲ, ಆಕಾಶ ಇಂದು ಕೈತಪ್ಪಿ ಕಾರ್ಪೋರೆಟ್ ಕೈಸೇರಿದೆ. ಬ್ಯಾಂಕಿಂಗ್ ತೊಟ್ಟಿಲು, ಶಿಕ್ಷಣದ ಮೆಟ್ಟಿಲು ಎಂದು ಕರೆಸಿಕೊಳ್ಳುವ ನಮ್ಮ ಕರಾಳಿಯಲ್ಲಿ ಇದೀಗ ಶಿಕ್ಷಣ ವ್ಯಾಪಾರೀಕರಣವಾಗಿದ್ದು ಬ್ಯಾಂಕುಗಳಲ್ಲಿ ಅನ್ಯಭಾಷಿಗರು ತುಂಬಿಹೋಗಿದ್ದಾರೆ. ಕರಾವಳಿ ನಾಡು ಇದೀಗ ಕಾರ್ಪೊರೇಟ್ ಬಿಳಿಯಾನೆಗಳ ಬಟ್ಟಲುಗಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಅನ್ನ, ಬಟ್ಟೆ, ಕೆಲಸದ ವಿಚಾರದಲ್ಲಿ ಕರಾವಳಿಯ ಸಾಮಾಜಿಕ ಬದುಕು ದಿನನಿತ್ಯ ಆತಂಕದಲ್ಲಿದೆ. ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆ ಕಮ್ಮಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬರುವ ಕೈಗಾರಿಕೆ, ಉದ್ಯಮಗಳು ಜನರಿಗೆ ಮಾರಕವಾಗು ತ್ತಿದೆ. ಮೀನುಗಾರಿಕೆ, ಪ್ರವಾಸೋಧ್ಯಮ ಯಾರದ್ದೋ ಪಾಲಾಗಿದೆ. ಇಲ್ಲಿ ಪರ್ಸಂಟೇಜ್ ಅಭಿವೃದ್ಧಿ ಹೆಚ್ಚಾಗಿದೆ. ಬೇರೆ ಬೇರೆ ವಿಚಾರದಲ್ಲಿ ಕರಾವಳಿಗೆ ಪ್ರಯೋಗ ಶಾಲೆ ಎಂಬ ಬಿರುದು ಸಿಕ್ಕಿದೆ. ರಾಜಕಾರಣಿಗಳಲ್ಲಿ ದೂರದೃಷ್ಟಿ ಚಿಂತನೆಗಳು ಇಲ್ಲವಾ ಗಿವೆ ಎಂದು ಅವರು ಆರೋಪಿಸಿದರು.
ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅಚ್ಯುತ ವಹಿಸಿದ್ದರು. ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸಮನ್ವಯಕಾರರಾಗಿದ್ದರು. ವಿಶೇಷ ಆಮಂತ್ರಿತರಾಗಿ ಡಾ.ಎನ್.ಗಾಯತ್ರಿ, ಮಂಜುಳಾ, ಶ್ಯಾಮಲಾ ಪೂಜಾರ, ಸುಕನ್ಯ ಕೆ., ವೇದಾ, ಯಮುನಾ ಗಾಂವಕಾರ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಉದಯ ಗಾಂವಕಾರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಸದಾನಂದ ಬೈಂದೂರು, ಕೋಶಾಧಿಕಾರಿ ಬಾಲಕೃಷ್ಣ ಕೆ.ಎಂ ಹಾಗೂ ಪದಾಧಿಕಾರಿಗಳು, ಉಪಸಮಿತಿಯ ಸಂಚಾಲಕರು ಸಹಕರಿಸಿದರು.
ತಾಳಮದ್ದಳೆ ಮೂಲಕ ಉದ್ಘಾಟನೆ
ಕೋವಿಡ್ ಬಳಿಕ ಮೊದಲ ಬಾರಿಗೆ ಸಮುದಾಯ ಸಾಂಸ್ಕೃತಿಕ ಸಂಘಟನೆಯು ನಡೆಸುತ್ತಿರುವ ಈ ಎರಡು ದಿನಗಳ ಸಮ್ಮೇಳನವನ್ನು ’ರಾಮ ಧಾನ್ಯ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಲಾಯಿತು.
ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ರಾಮನಾಗಿ ಮಾಧವಿ ಭಂಡಾರಿ ಕೆರೆಕೋಣ ಜಾನಕಿಯಾಗಿದ್ದು ಭಾಗವತಿಕೆಯಲ್ಲಿ ಚಿಂತನಾ ಮಾಳ್ಕೋಡು, ಶಶಾಂಕ್ ಅಚಾರ್ಯ ಮದ್ದಲೆಯಲ್ಲಿದ್ದರು. ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವಾ ತಲಪಾಡಿ, ಡಾ.ಜಗದೀಶ್ ಶೆಟ್ಟಿ, ಮುಷ್ತಾಕ್ ಹೆನ್ನಾಬೈಲ್ ಅರ್ಥಧಾರಿಗಳಾಗಿದ್ದರು.
"ಸಂವಿಧಾನದ ಮೂಲಕವಾಗಿ ರಾಷ್ಟ್ರೀಯತೆ ಪರಿಕಲ್ಪನೆ ತಂದುಕೊಟ್ಟವರು ಡಾ. ಬಿ.ಆರ್.ಅಂಬೇಡ್ಕರ್. ಅವರು ಮೊದಲ ಬಾರಿ ಭಾರತಕ್ಕೆ ವ್ಯಾಕರಣ ಬರೆದಿದ್ದಾರೆ. ಈ ಮೊದಲು ಅವರಿಗೆ ಬೇಕಾದಂತೆ ವ್ಯಾಕರಣ ಬರೆಯಲಾಗಿತ್ತು. ಹಿಂದೂಗಳೆಲ್ಲರಿಗೂ ಅನ್ವಯವಾಗುವ ಶಾಸ್ತ್ರ ಬರೆಯಿರಿ ಎಂದೂ ಹಲವು ದಶಕಗಳ ಹಿಂದೆ ಅಂಬೇಡ್ಕರ್ ಹಿಂದೂ ಮಹಾಸಭಾಕ್ಕೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಾರದಿರುವುದು ದುರಂತ"
-ಡಾ.ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು
ಪ್ಯಾಲೆಸ್ತೀನ್ ಫ್ರೀಡಂ ಥಿಯೇಟರ್ ಕಲಾವಿದರಿಗೆ ಬೆಂಬಲ: ನಿರ್ಣಯ
ಪ್ಯಾಲೆಸ್ತಿನ್ ಮೇಲೆ ಆಕ್ರಮಣ ನಡೆಸುತ್ತಿರುವ ಇಸ್ರೆಲ್ ದಾಳಿಗೆ ಒಳಗಾದ ಫ್ರೀಡಂ ಥಿಯೇಟರ್ ಕಲಾವಿದರ ಬೆಂಬಲಕ್ಕೆ ಸಮುದಾಯ ಕರ್ನಾಟಕ ನಿಲ್ಲುತ್ತದೆ ಮತ್ತು ದಾಳಿಯನ್ನು ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನ ಖಂಡಿಸುತ್ತದೆ ಎಂಬ ನಿರ್ಣಯವನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು.
ಪ್ಯಾಲೆಸ್ತೀನ್‌ನಲ್ಲಿರುವ ಫ್ರೀಡಂ ಥಿಯೇಟರ್ 2006ರಲ್ಲಿ ಹುಟ್ಟಿಕೊಂಡ ಒಂದು ರಂಗ ಸಂಘಟನೆ. ಪ್ಯಾಲೆಸ್ತೀನ್ ಜೆನಿನ್ ನಿರಾಶ್ರಿತರ ಕ್ಯಾಂಪಿನಲ್ಲಿ ಕೆಲಸ ಮಾಡುತ್ತ, ಅಲ್ಲಿನ ಜನರ, ಮಕ್ಕಳ ಜೊತೆ ಬೆರೆಯುತ್ತಾ ಹಿಂಸೆಯ ವಿರುದ್ಧ ಒಂದು ಸಾಂಸ್ಕೃತಿಕ ಪ್ರತಿರೋಧವನ್ನು ಘನತೆಯ ಬದುಕಿಗಾಗಿ ಕಟ್ಟಿಕೊಡುತ್ತಿರುವ ಸಂಘಟನೆ.
ಸಹಜವಾಗಿಯೇ ಈ ಸಂಸ್ಥೆಯ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲಿವೆ. ಇದರ ಮುಖ್ಯಸ್ಥರಲ್ಲೊಬ್ಬರಾದ ಜ್ಯೂಲಿಯಾನೋ 2011ರಲ್ಲಿ ತಾಲೀಮು ಮುಗಿಸಿ ಹೊರಬರುತ್ತಲೇ ಗುಂಡೇಟಿಗೆ ಹತರಾದರು. ಆದರೂ ಧೃತಿಗೆಡದೆ ಫ್ರೀಡಂ ಥಿಯೇಟರ್ ಈಗಲೂ ಪ್ಯಾಲೆಸ್ಟೇನಿನ ಆ ಭಾಗದ ಸಮುದಾಯದ ನೋವಿಗೆ ದನಿಯಾಗಿ ನಿಂತಿದೆ. 2015ರಲ್ಲಿ ಭಾರತಕ್ಕೆ ಬಂದಾಗ ದೆಹಲಿಯ ಜನನಾಟ್ಯಮಂಚ್ ಜೊತೆಗೆ ನಮ್ಮ ಸಮುದಾಯ ಕರ್ನಾಟಕವೂ ಭಾಗವಾಗಿ ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳನ್ನು ಫ್ರೀಡಂ ಜಾಥಾ ಹೆಸರಿನಲ್ಲಿ ಆಯೋಜಿಸಿತ್ತು.
ಈಗ ತೀರ ಇತ್ತೀಚಿಗೆ ಇಸ್ರೇಲ್ ಪ್ಯಾಲೆಸ್ತೇನ್ ಸಂಘರ್ಷ ಉಲ್ಬಣವಾಗಿರುವ ಈ ಸಂದರ್ಭದಲ್ಲಿ, ಪ್ಯಾಲೆಸ್ಟೇನ್ ಮೇಲೆ ನಿಲ್ಲದ ಇಸ್ರೇಲ್ ದಾಳಿಯ ಸಂದರ್ಭದಲ್ಲಿ ಫ್ರೀಡಂ ಥಿಯೇಟರ್ ಮೇಲೆಯೂ ದಾಳಿಗಳಾಗುತ್ತಿವೆ. ಇದೇ ತಿಂಗಳ 13ರಂದು ಫ್ರೀಡಂ ಥಿಯೇಟರ್‌ನ ನಟರ ಮೇಲೆ ಹಲ್ಲೆಗಳಾಗಿದ್ದು ಮುಖ್ಯ ನಟರೊಬ್ಬರ ಬಂಧನವಾಗಿದೆ. 8ನೇ ರಾಜ್ಯ ಸಮ್ಮೇಳನದ ಈ ಸಂದರ್ಭದಲ್ಲಿ ಸಮುದಾಯ ಕರ್ನಾಟಕ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಫ್ರೀಡಂ ಥಿಯೇಟರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ ಮತ್ತು ಫ್ರೀಡಂ ಥಿಯೇಟರ್ ಜೊತೆಗೆ ನಾವು ನಿಲ್ಲುತ್ತೇವೆ ಎಂದು ನಿರ್ಣಯಿಸಲಾಯಿತು.
ವೆಂಕಟೇಶ ಪ್ರಸಾದ್ ನಿರ್ಣಯ ಮಂಡಿಸಿದರು.







