ಮಣಿಪಾಲ ವಿ.ಪಿ.ನಗರದಲ್ಲಿ ಅಪರಾಧ ತಡೆಯುವ ದೃಷ್ಠಿ ಯೋಜನೆಗೆ ಚಾಲನೆ

ಮಣಿಪಾಲ, ಜ.10: ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಆರಂಭಿಸಿರುವ ಮಹತ್ವಾಕಾಂಕ್ಷೆಯ ದೃಷ್ಟಿ ಯೋಜನೆಗೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಮಣಿಪಾಲದ ವಿ.ಪಿ.ನಗರದಲ್ಲಿರುವ 86 ಮನೆಗಳನ್ನು ಕೇಂದ್ರೀಕರಿಸಿ ಕೊಂಡು ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್ ಏಜೆನ್ಸಿಯಿಂದ ಒಬ್ಬ ಸಂಪೂರ್ಣ ತರಬೇತಿ ಪಡೆದ ಗಾರ್ಡನ್ನು ನೇಮಕ ಮಾಡಿ, ಇಲ್ಲಿ ಕಳ್ಳತನ ಸೇರಿದಂತೆ ಯಾವುದೇ ಅಪರಾಧ ನಡೆಯದಂತೆ ತಡೆಯಲಾಗುತ್ತದೆ. ಇದು ಜಿಲ್ಲೆಯ 12ನೆ ದೃಷ್ಠಿ ಯೋಜನೆಯಾಗಿದೆ.
ಯೋಜನೆಯನ್ನು ಉದ್ಘಾಟಿಸಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಮಾತನಾಡಿ, ಒಂದು ಕಡೆ ಒಮ್ಮೆ ಕಳ್ಳತನ ನಡೆದರೆ ಕಳ್ಳರನ್ನು ಪತ್ತೆ ಮಾಡುವುದು ಅಷ್ಟು ಸುಲಭ ಅಲ್ಲ. ಯಾಕೆಂದರೆ ಕಳ್ಳರು ಅಲ್ಲೇ ಇರಲ್ಲ. ದೂರ ಹೋಗಿರುವುದರಿಂದ ಅವರನ್ನು ಹುಡುಕಲು ತುಂಬಾ ಸಮಯ ಬೇಕಾಗುತ್ತದೆ. ಅಲ್ಲದೆ ಮನೆಯವರು ಕೂಡ ಆರ್ಥಿಕ ನಷ್ಟ ಅನುಭವಿಸುತ್ತಾರೆ. ಆದುದರಿಂದ ನಾವು ಬಹಳ ಎಚ್ಚರಿಕೆಯಿಂದ ಇದ್ದು, ಕಳ್ಳತನ ನಡೆಯದಂತೆ ತಡೆಯಬೇಕಾಗಿದೆ. ಇದಕ್ಕೆ ಈ ದೃಷ್ಠಿ ಯೋಜನೆ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ದೃಷ್ಠಿ ಯೋಜನೆಯ ಅಧ್ಯಕ್ಷ ಸುರೇಶ್ ಕುಮಾರ್, ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್‌ನ ಎಚ್‌ಆರ್ ಕಾವ್ಯ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿಪಿ ನಗರದ ನಾಗರಿಕರು ಉಪಸ್ಥಿತರಿದ್ದರು.
ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೊಲೀಸ್ ಉಪನಿರೀಕ್ಷಕ ಅನಿಲ್ ವಂದಿಸಿದರು. ಸಿಬ್ಬಂದಿ ಚೇತನ್ ಕಾರ್ಯಕ್ರಮ ನಿರೂಪಿಸಿದರು.







