ಉಡುಪಿ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಶೇ.90ರಷ್ಟು ಪೂರ್ಣ: ಶೀಘ್ರವೇ ಸರಕಾರಕ್ಕೆ ವರದಿ ಸಲ್ಲಿಕೆ
ಒಟ್ಟು 9.77ಲಕ್ಷ ಜಮೀನು ಗುರುತು

ಉಡುಪಿ, ಅ.24: ಬೆಳೆ ನಷ್ಟ ಪರಿಹಾರಕ್ಕಾಗಿ ಸರಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಕಾರ್ಯವು ಸಾಕಷ್ಟು ವೇಗ ಪಡೆದುಕೊಂಡಿದ್ದು, ಈಗಾಗಲೇ ಶೇ.90.66ರಷ್ಟು ಕಾರ್ಯ ಪೂರ್ಣಗೊಂಡಿದೆ.
ಬೆಳೆ ಸಮೀಕ್ಷೆ ಕಾರ್ಯವನ್ನು ಕೃಷಿ ಅಧಿಕಾರಿ, ಸಿಬಂದಿ, ರೈತರು, ಪಿಆರ್ (ಖಾಸಗಿ ನಿವಾಸಿ) ತಂಡವು ಮೊಬೈಲ್ ಮೂಲಕ ಮಾಹಿತಿ ಪಡೆದುಕೊಂಡು ಅಪ್‌ಲೋಡ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಈ ಕಾರ್ಯವನ್ನು ಪೂರ್ಣ ಗೊಳಿಸಿ ಬೆಳೆ ನಷ್ಟ ಪರಿಹಾರಕ್ಕಾಗಿ ಶೀಘ್ರವೇ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
824 ಮಂದಿ ನಿಯೋಜನೆ: ಉಡುಪಿ ಜಿಲ್ಲೆಯಲ್ಲಿ ಪ್ರತಿದಿನವೂ 700ರಿಂದ 1000 ಪ್ರದೇಶ(ಜಮೀನು)ದಲ್ಲಿ ಸಮೀಕ್ಷಾ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಚುರುಕು ನೀಡಿರುವ ಹಿನ್ನೆಲೆಯಲ್ಲಿ ಇದೀಗ ಈ ಕಾರ್ಯವು ಅಂತಿಮ ಹಂತಕ್ಕೆ ಬಂದಿದೆ.
ಬೆಳೆ ಸಮೀಕ್ಷೆ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು 824 ಮಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ 151, ಬೈಂದೂರು ತಾಲೂಕಿನಲ್ಲಿ 83, ಹೆಬ್ರಿ ತಾಲೂಕಿನಲ್ಲಿ 34, ಕಾಪು ತಾಲೂಕಿನಲ್ಲಿ 99, ಕಾರ್ಕಳ ತಾಲೂಕಿನಲ್ಲಿ 128, ಕುಂದಾಪುರ ತಾಲೂಕಿನಲ್ಲಿ 210, ಉಡುಪಿ ತಾಲೂಕಿನಲ್ಲಿ 119 ಮಂದಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮಗಳ ಹಿಸ್ಸಾವಾರು ಮ್ಯಾಪಿಂಗ್‌ನ್ನು ತೆಗೆದುಹಾಕಿ ಸರ್ವೆ ನಂಬರ್‌ವಾರು ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ನಿವಾಸಿಗಳು (ಪಿಆರ್)ಮಾಸ್ಟರ್ ಡೇಟಾ, ಪಹಣಿ, ಜಿ.ಐ.ಎಸ್ ಮ್ಯಾಪ್‌ನ್ನು ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
8.82 ಲಕ್ಷ ಜಮೀನು: ಉಡುಪಿ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆಗೆ ಒಟ್ಟು 9.77 ಲಕ್ಷ ಜಮೀನು ಗುರುತಿಸಲಾಗಿದ್ದು, ಈಗಾಗಲೆ 8.82 ಲಕ್ಷ ಜಮೀನಿನ ಸಮೀಕ್ಷೆ ಮಾಡಲಾಗಿದೆ.
ಇಡೀ ಜಿಲ್ಲೆಯಲ್ಲಿ 1,570 ಮಂದಿ ರೈತರು ಮಾತ್ರ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲು ಮಾಡಿದ್ದಾರೆ. ಪಿಆರ್ ಗಳಿಂದ 8.88 ಲಕ್ಷ ಜಮೀನು ಸಮೀಕ್ಷೆ ಮಾಡಲಾಗಿದೆ. ದ್ವಿತೀಯ ಹಂತದ ಸಮೀಕ್ಷೆಯಿಂದ 1,610 ಜಮೀನುಗಳನ್ನು ಹೊರತುಪಡಿಸಲಾಗಿದೆ.
ಅ.15ರವರೆಗೆ ಬ್ರಹ್ಮಾವರ ತಾಲೂಕಿನಲ್ಲಿ ಶೇ.98.29, ಬೈಂದೂರು ಶೇ.80.63, ಹೆಬ್ರಿ ಶೇ.86.02, ಕಾಪು ಶೇ.94.99, ಕಾರ್ಕಳ ಶೇ.94.54, ಕುಂದಾಪುರ ಶೇ.92.77, ಉಡುಪಿ ತಾಲೂಕಿನಲ್ಲಿ ಶೇ.75.59ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಶೇ.90ರಷ್ಟು ಪೂರ್ಣಗೊಂಡಿದ್ದು, ಪ್ರತೀಕೂಲ ಹವಾಮಾನದಿಂದ ಬೆಳೆ ನಾಶವಾಗಿರುವ ಕೆಲವು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ಬಾಕಿ ಇದೆ. ಇಲ್ಲಿಯೂ ಸಮೀಕ್ಷೆ ಕಾರ್ಯವನ್ನು ಶೀಘ್ರ ಪೂರ್ಣ ಗೊಳಿಸಲಾಗುವುದು. ಸುಮಾರು 800ಕ್ಕೂ ಅಧಿಕ ಮಂದಿ ಈ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
-ಡಾ.ಸೀತಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ ಜಿಲ್ಲೆ







