ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ, ಬಿಜೆಪಿ ಮುಖಂಡನಿಂದ ಕೋಟ್ಯಂತರ ರೂ. ವಂಚನೆ?
ಬೈಂದೂರು ಗೋವಿಂದ ಬಾಬು ಪೂಜಾರಿ ಹೆಸರಿನ ಪತ್ರ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರದ ಪ್ರತಿ
ಉಡುಪಿ, ಆ.6: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಪಕ್ಷ ಮತ್ತು ಆರೆಸ್ಸೆಸ್ ಹೆಸರಿನಲ್ಲಿ ಕೋಟ್ಯಂತ ರೂ. ಪಡೆದು ಕೆಲವರು ವಂಚಿಸಿರುವ ಬಗ್ಗೆ ಬಿಜೆಪಿ ಮುಖಂಡ, ಉದ್ಯಮಿ ಗೋವಿಂದ ಬಾಬು ಪೂಜಾರಿ ಬರೆದಿದ್ದರೆನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಘದ ಮುಖಂಡರಿಗೆ ಬರೆದಂತಿರುವ ಈ ಪತ್ರದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲು ’ವಾರ್ತಾಭಾರತಿ’ ಗೋವಿಂದ ಬಾಬು ಪೂಜಾರಿಯನ್ನು ಹಲವು ಬಾರಿ ಸಂಪರ್ಕಿಸಿದ್ದು, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ವೈರಲ್ ಪತ್ರದಲ್ಲಿ ಏನಿದೆ?
ಮೂಲತಃ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನಿವಾಸಿಯಾಗಿರುವ ಹೊಟೇಲ್ ಉದ್ಯಮಿ ಗೋವಿಂದ ಬಾಬು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ವಿಚಾರವಾಗಿ ಸಂಘ ಪರಿವಾರದ ನಾಯಕಿ ಚೈತ್ರಾ ಕುಂದಾಪುರ ಮೂಲಕ ಪರಿಚಯವಾದ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಅವರು ವಿಶ್ವನಾಥ್ ಜೀ ಎಂಬವರ ಬಗ್ಗೆ ಮಾಹಿತಿ ನೀಡುತ್ತಾರೆ. ವಿಶ್ವನಾಥ್ ಜೀ ಆರೆಸ್ಸೆಸ್ ಹಿರಿಯ ಪ್ರಚಾರಕ ಮತ್ತು ಮತ್ತು ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿದ್ದಾರೆ ಎಂದು ಗಗನ್ ಕಡೂರು ಹೇಳಿದ್ದು, ಒಂದು ದಿನ ಚಿಕ್ಕಮಗಳೂರಿನ ಸರಕಾರಿ ಗೆಸ್ಟ್ ಹೌಸ್ ನಲ್ಲಿ ಪರಿಚಯ ಮಾಡಿಸುತ್ತಾರೆ. ಈ ವೇಳೆ ವಿಶ್ವನಾಥ್ ಜೀ, "ನೀವು ಎಷ್ಟೋ ಸಮಾಜ ಸೇವೆ ಮಾಡಿದ್ದೀರಿ ಮತ್ತು ಪಕ್ಷ ಸಂಘಟನೆಯಲ್ಲಿ ದುಡಿದಿದ್ದೀರಿ. ಆದರೂ ಹಣ ಕೊಡದಿದ್ದರೆ ಟಿಕೆಟ್ ನಿಮಗೆ ಸಿಗಲು ಸಾಧ್ಯವಿಲ್ಲ. 3.5 ಕೋಟಿ ರೂ. ಕೊಟ್ಟರೆ ಟಿಕೆಟ್ ಕೊಡಿಸುತ್ತೇನೆ. 3.5 ಕೋಟಿ ರೂ.ನಲ್ಲಿ 3 ಕೋಟಿ ದಿಲ್ಲಿ ಟೀಮ್ ಗೆ ಹೋಗುತ್ತದೆ, ಉಳಿದ 50 ಲಕ್ಷ ರೂ. ನನಗೆ" ಎಂದು ಆತ ಹೇಳುತ್ತಾರೆ.
ಬೇರೆ ದಿಕ್ಕು ಕಾಣದೆ ತಾನು ಒಂದು ಆಸ್ತಿಯ ಮೇಲೆ 3 ಕೋಟಿ ರೂ. ಮತ್ತು 2 ಕೋಟಿ ರೂ.ವನ್ನು ಖಾಸಗಿ ಫೈನಾನ್ಸ್ ನಿಂದ ತಗೆದಿದ್ದೆ. ಬಳಿಕ ಅವರು ತಿಳಿಸಿದ ಪ್ರಕಾರ ವಿಶ್ವನಾಥ್ ಜೀ ಗೆ ತಲುಪಿಸಲೆಂದು 3.5 ಕೋಟಿ ರೂ.ವನ್ನು ಗಗನ್ ಕಡೂರು ಅವರಿಗೆ ಕೊಟ್ಟಿದ್ದೇನೆ. ಇದಾದ ಬಳಿಕ ಎರಡು ದಿನಗಳ ಬಳಿಕ ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಅವರು ವಿಶ್ವನಾಥ್ ಜೀ ಜೊತೆ ಕಾನ್ಸರೆನ್ಸ್ ಕಾಲ್ ಮೂಲಕ ಮಾತನಾಡಿಸಿ ಹೊಸಪೇಟೆಯಲ್ಲಿರುವ ಶ್ರೀ ಹಾಲಶ್ರೀ ಸ್ವಾಮೀಜಿಯನ್ನು ಭೇಟಿ ಮಾಡಲು ಹೇಳುತ್ತಾರೆ.
ಅದರಂತೆ ಹಾಲಶ್ರೀ ಸ್ವಾಮೀಜಿಯನ್ನು ನಾನು ಭೇಟಿ ಮಾಡಿದಾಗ ವಿಶ್ವನಾಥ ಸ್ವಾಮೀಜಿಗೆ ಸಂಘದ ದೊಡ್ಡ ಜವಾಬ್ದಾರಿ ಇರುವ ಕಾರಣ ನನಗೆ ಅವರು ರಾಜ್ಯ ಬಿಜೆಪಿಯ ಎಲ್ಲ ಜವಾಬ್ದಾರಿಯನ್ನು ಕೊಟ್ಟಿರುತ್ತಾರೆ. ಮತ್ತು ನಾನು ಮೋದಿಯವರ ಕೇಂದ್ರ ಸಮಿತಿಯಲ್ಲಿ ಜವಾಬ್ದಾರಿಯಲ್ಲಿ ಇದ್ದೀನಿ ಎಂದು ತಿಳಿಸಿರುತ್ತಾರೆ. ನೀವು ನನಗೆ 1.5 ಕೋಟಿ ರೂ. ಕೊಡಬೇಕು. ನಾನು ನಿಮಗೆ ಟಿಕೆಟ್ ಕೊಡಿಸುತ್ತೇನೆ ಎಂದು ಅವರು ಕನ್ಸರ್ವ್ ಮಾಡಿರುತ್ತಾರೆ. ಅದೇ ರೀತಿ ಅವರಿಗೂ ಒಂದು ಕೋಟಿಯ ಐವತ್ತು ಲಕ್ಷ ರೂ. ಬೆಂಗಳೂರಿನಲ್ಲಿ ಕೊಟ್ಟಿದ್ದೇನೆ.
ಹಾಗೆ ಒಂದು ಚುನಾವಣೆಗೆ ತಿಂಗಳು ಮೊದಲು, ಬಿಜೆಪಿಯ ಮುಖ್ಯ ಕಚೇರಿಯಿಂದ ದೂರವಾಣಿ ಕರೆ ಬಂದಿದೆ, ನೀವು ಚುನಾವಣೆಗೆ ತಯಾರಿಗಳನ್ನು ಮಾಡಿಕೊಳ್ಳಿ ಎಂದು ಸ್ವಾಮೀಜಿ ನನಗೆ ಹೇಳಿದ್ದರು. ಅದೇ ರೀತಿ ನಾನು ನನ್ನ ಕ್ಷೇತ್ರದಲ್ಲಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೆ. ಅದೇ ಸಮಯದಲ್ಲಿ ನೀವು ಬಿಜೆಪಿಯ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸೆಲೆಕ್ಷನ್ ಕಮಿಟಿ ನಿಮ್ಮ ಹೆಸರನ್ನು ಅಂತಿಮಗೊಳಿಸಿದೆ ವಿಶ್ವನಾಥ್ ಜೀ ಕೂಡಾ ತಿಳಿಸಿದ್ದರು
ಅದಾದ ಎರಡು ದಿನಗಳ ನಂತರ ವಿಶ್ವನಾಥ್ ಜೀ ಅವರು ಗಗನ್ ಕಡೂರು ಅವರ ಮೂಲಕ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡುತ್ತಾ, ನಾನು ಪ್ರಚಾರಕ್ಕಾಗಿ 10 ದಿನಗಳ ಕಾಲ ಕಾಶ್ಮೀರಕ್ಕೆ ಹೋಗುತ್ತಿದ್ದೇನೆ, ನಿಮ್ಮ ಎಲ್ಲ ಕೆಲಸವನ್ನು ಮಾಡಿಸಿದ್ದೇನೆ ನೀವು ತಯಾರಿಗಳನ್ನು ನಡೆಸಿ ಎಂದು ಹೇಳಿದ್ದರು. ನಂತರ ಒಂದು ವಾರ ಬಿಟ್ಟು ಗಗನ್ ಕಡೂರ್ ಕರೆ ಮಾಡಿ ವಿಶ್ವನಾಥ್ ಜೀ ಕಾಶ್ಮೀರದಲ್ಲಿ ಮೃತಪಟ್ಟಿರುವುದಾಗಿ ತಿಳಿಸುತ್ತಾರೆ. ಈ ವೇಳೆ ನಾನಲ್ಲಿಗೆ ಹೋಗುತ್ತೇನೆ ಎಂದಾಗ ಇಂದು ಸಂಜೆಯೊಳಗೆ ಸಂಘದ ಕಾರ್ಯಾಲಯದಲ್ಲಿ ಅವರ ಅಂತಿಮ ಕಾರ್ಯ ಮುಗಿಯಲಿದೆ ಎಂದು ಗಗನ್ ಕಡೂರು ಹೇಳಿದರು.
ಇದಾದ 3 ದಿನಗಳ ಬಳಿಕ ಒಬ್ಬ ಪರಿಚಯದ ನಿವೃತ ಸೈನಿಕ ಆಫೀಸರ್ ನ್ನು ಕಾಶ್ಮೀರದ ಸಂಘದ ಕಾರ್ಯಾಲಯಕ್ಕೆ ಕಳುಹಿಸಿ ವಿಚಾರಿಸಿದಾಗ ಶ್ರೀನಗರಕ್ಕೆ ವಿಶ್ವನಾಥ್ ಜೀ ಅನ್ನುವವರು ಯಾರು ಬಂದಿರುವುದಿಲ್ಲ ಮತ್ತು ಅಂತಹ ಯಾವುದೇ ವ್ಯಕ್ತಿ ಮರಣ ಹೊಂದಿಲ್ಲ ಎಂದು ತಿಳಿದುಬಂತು. ಈ ವಿಚಾರವನ್ನು ಸಂಘದ ಹಿರಿಯ ವ್ಯಕ್ತಿಯೊಬ್ಬರಿಗೆ ತಿಳಿಸಿದಾಗ ನಮ್ಮ ಸಂಘದಲ್ಲಿ ವಿಶ್ವನಾಥ್ ಜೀ ಅನ್ನುವ ವ್ಯಕ್ತಿಯೇ ಇಲ್ಲ ಎಂದು ಹೇಳಿದರು.
ಇದೇ ವಿಚಾರವಾಗಿ ನಾನು ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಅವರಲ್ಲಿ ಹೇಳಿಕೊಂಡಾಗ ಅವರು ನಮಗೆ ವಿಶ್ವನಾಥ್ ಜೀ ಪರಿಚಯವೇ ಇಲ್ಲ ಎಂದು ಸುಳ್ಳು ಹೇಳಿದರು. ಇಷ್ಟೆಲ್ಲ ಆಗುವಷ್ಟರಲ್ಲಿ ಪಕ್ಷದ ಹಾಗೂ ಸಂಘದ ಹೆಸರಿನಲ್ಲಿ ಮೋಸ ಆಗಿರುವುದು ತನ್ನ ಅರಿವಿಗೆ ಬಂತು. ಈ ಎಲ್ಲ ವಿಷಯದಲ್ಲಿ ಮುಖ್ಯ ಪಾತ್ರದಲ್ಲಿ ಗಗನ್ ಕಡೂರು ಇದ್ದಾರೆ. ಅವರನ್ನು ಕಾನೂನಿನ ಮೂಲಕ ವಿಚಾರಿಸಿದರೆ ಎಲ್ಲ ಸತ್ಯ ಸಂಗತಿ ಹೊರಬರಲಿದೆ. ಆದ್ದರಿಂದ ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗೋವಿಂದ ಬಾಬು ಪೂಜಾರಿ ಬರೆದಿದ್ದೆನ್ನಲಾದ ಪತ್ರದಲ್ಲಿ ವಿನಂತಿಸಲಾಗಿದೆ.
ಕಾನೂನು ಹಾಗು ಪೊಲೀಸ್ ವ್ಯವಸ್ಥೆ ಮೇಲೆ ನನಗೆ ಅಪಾರ ನಂಬಿಕೆ ಇದೆ. ಆ ನಂಬಿಕೆ ಯಿಂದ ನನಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ತಾವುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನನಗೆ ನ್ಯಾಯ ಮತ್ತು ಕಳೆದುಕೊಂಡಿರುವ ಹಣವನ್ನು ಹಿಂದಿರುಗಿಸಿಕೊಡಿಸಬೇಕೆಂದು ಕೇಳಿ ಕೊಳ್ಳುತ್ತೇನೆ.
ನನ್ನ ಹತ್ತಿರ ಅವರು ಮಾತನಾಡಿರುವ ಎಲ್ಲ ದಾಖಲೆಗಳು, ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ ಕೂಡ ಇವೆ. ಮುಂದೆ ಯಾರಿಗೂ ಈ ತರಹವಾದ ಮೋಸ ಆಗಬಾರದು. ನನಗೆ ಸೀಟ್ ಸಿಗದಿದ್ದರೂ ಪಕ್ಷದ ಜವಾಬ್ದಾರಿ ಹಾಗೂ ಒಬ್ಬ ಸಂಘದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ . ಪಕ್ಷದ ಅಭ್ಯರ್ಥಿಯ ಪರವಾಗಿ ಶ್ರದ್ಧೆ ಯಿಂದ ಕೆಲಸ ಮಾಡಿ ಗೆಲ್ಲಿಸಿ ಕೊಟ್ಟಿರುತ್ತೇನೆ. ಮುಂದೆಯು ಸಹ ಒಬ್ಬ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಪತ್ರದಲ್ಲಿ ಹೇಳಲಾಗಿದೆ.







