ಜು.25 ಮತ್ತು 26ರಂದು ಉಡುಪಿಯಲ್ಲಿ ‘ಸಂಸ್ಕೃತಿ ಸಂಭ್ರಮ’

ಉಡುಪಿ, ಜು.24: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ನಟಕ ಅಕಾಡೆಮಿಗಳು ರಂಗಭೂಮಿ ಉಡುಪಿಯ ಸಹಯೋಗದಲ್ಲಿ ಜು.25 ಮತ್ತು 26ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಸಂಸ್ಕೃತಿ ಸಂಭ್ರಮ’ ಎಂಬ ವೈವಿಧ್ಯಮಯ ಕಲಾ ಪ್ರದರ್ಶನಗಳನ್ನು ಹಮ್ಮಿಕೊಂಡಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಸ್ಕೃತಿ ಸಂಭ್ರಮ ಕಾರ್ಯಕ್ರಮವನ್ನು ಜು.25ರ ಸಂಜೆ 4:00ಗಂಟೆಗೆ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದಾರೆ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ವಿಧಾನಪರಿಷ್ ಸದಸ್ಯ ಮಂಜುನಾಥ ಭಂಡಾರಿ ಉದ್ಯಮಿ ರವೀಂದ್ರ ಶೆಟ್ಟಿ, ನಾಟಕ ಅಕಾಡೆಮಿಯ ಸಂತೋಷ್ ನಾಯಕ್ ಪಟ್ಲ ಹಾಗೂ ಪ್ರೊ.ವನಿತಾ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವ ಖ್ಯಾತ ರಂಗಕರ್ಮಿ, ನಟ ಡಾ.ಕೆ.ವಿ.ನಾಗರಾಜ ಮೂರ್ತಿ ಅವರನ್ನು ಸನ್ಮಾನಿಸ ಲಾಗುವುದು ಎಂದು ಶಿವರಾಮ ಶೆಟ್ಟಿ ತಲ್ಲೂರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಪ್ರಾರಂಭಕ್ಕೆ ಮುನ್ನ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ,್ಗನ ಬೊಂಬೆಯಾಟ ಸಂಘದಿಂದ ಕೆ.ವಿ.ರಮೇಶ್ ನಿರ್ದೇಶನದಲ್ಲಿ ‘ನರಕಾಸುರ ವಧೆ, ಗರುಡ ಗರ್ವಭಂಗ’ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನಡೆಯಲಿದೆ.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಜಾನಪದ ಕಲಾ ಪ್ರದರ್ಶನವಾಗಿ ಶಿವಮೊಗ್ಗ ಜಿಲ್ಲೆಯ ಟಾಕಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಹದೇವ ಮೂರ್ತಿ ಮತ್ತು ತಂಡದಿಂದ ಕಂಸಾಳೆ ನೃತ್ಯ ಪ್ರದರ್ಶನ ನಡೆಯಲಿದೆ.
ಜು.26ರಂದು ಸಂಜೆ 4ಗಂಟೆಗೆ ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ತಂಡದಿಂದ ‘ಸಂಗೀತ ಸುಧೆ’ ಕಾರ್ಯಕ್ರಮವಿದ್ದರೆ, ಸಂಜೆ 6ಗಂಟೆಗೆ ರಂಗಭೂಮಿ ಉಡುಪಿ ತಂಡದಿಂದ ಖ್ಯಾತ ಮರಾಠಿ ನಾಟಕಕಾರ ಜಯವಂತ ದಳ್ವಿ ರಚಿಸಿ, ಎಚ್.ಕೆ.ಕರ್ಕೇರ ಕನ್ನಡಕ್ಕೆ ಅನುವಾದಿಸಿದ ‘ಕಾಲಚಕ್ರ’ ನಾಟಕ ಪ್ರದೀಪ್‌ಚಂದ್ರ ಕುತ್ಪಾಡಿ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಸಂಜೆ 5ಗಂಟೆಗೆ ಸಮಾರೋಪ ಸಮಾರಂಭವನ್ನು ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು, ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷ ಎನ್.ಆರ್. ಬಲ್ಲಾಳ್, ಶ್ರೀಪಾದ ಹೆಗಡೆ ಹಾಗೂ ಜಿಲ್ಲಾ ಜಾನಪದ ಪರಿಷತ್‌ನ ರವಿರಾಜ ನಾಯಕ್ ಉಪಸ್ಥಿತ ರಿದ್ದರು.







