ತೋಟಕ್ಕೆ ಅಳವಡಿಸಿದ ಐಬೆಕ್ಸ್ ಬೇಲಿ ವಿದ್ಯುತ್‌ನಿಂದ ತಂದೆಯ ಸಾವಿಗೆ ಕಾರಣವಾದ ಮಗಳು: ಆರೋಪ

ಶಂಕರನಾರಾಯಣ, ಜೂ.11: ಸಿದ್ಧಾಪುರ ಗ್ರಾಮದ ಕಿರ್ಲಾಡಿಯಲ್ಲಿ ಮನೆಯ ತೋಟಕ್ಕೆ ಅಳವಡಿಸಿದ ಐಬೆಕ್ಸ್ ಬೇಲಿಯ ವಿದ್ಯುತ್ ತಗಲಿ ಮನೆಯ ಯಜಮಾನ ತನ್ನ ತಂದೆ ಗಾಂಧಿ ಶೆಟ್ಟಿ ಕಳೆದ ಎಪ್ರಿಲ್ 21ರಂದು ಮೃತಪಟ್ಟಿದ್ದು, ಇದಕ್ಕೆ ತನ್ನ ತಂಗಿ ಪ್ರೀತಿ ಶೆಟ್ಟಿ ಕಾರಣ ಎಂದು ಮೃತರ ಪುತ್ರ ಪ್ರವೀಣಕುಮಾರ್ ಶೆಟ್ಟಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಂದೆಯವರು ಎ.21ರಂದು ಕರೆಂಟ್ ಶಾಕ್‌ನಿಂದ ಮೃತಪಟ್ಟಿರುವುದಾಗಿ ಕಿರ್ಲಾಡಿಯ ನಿತಿನ್ ಎಂಬವರು ಅದೇ ದಿನ ಸಂಜೆ 7:20ಕ್ಕೆ ದೂರವಾಣಿ ಮೂಲಕ ತಿಳಿಸಿದ್ದರು. ಮನೆಯ ಮೋಟಾರು ಶೆಡ್ಡಿನಲ್ಲಿ ವಿದ್ಯುತ್ ತಗಲಿ ಮೃತಪಟ್ಟಿದ್ದಾಗಿ ತಂಗಿ ಪ್ರೀತಿ ಶೆಟ್ಟಿ ಸುಳ್ಳು ಮಾಹಿತಿಯನ್ನು ನೀಡಿ ಶಂಕರನಾರಾಯಣ ಠಾಣೆಗೆ ನೀಡಿ ಅಸ್ವಾಭಾವಿಕ ಮರಣ ಪ್ರಕರಣ ದಾಖಿಸಿದ್ದರು. ಅಲ್ಲದೇ ಎಲ್ಲಾ ಸಾಕ್ಷ್ಯನಾಶ ಮಾಡಿರುವುದಾಗಿ ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ.
ತಂದೆಯ ಸಾವಿನ ಬಗ್ಗೆ ತನಗೆ ಸಂಶಯ ಮೂಡಿದ್ದು, ಸ್ಥಳೀಯರಾದ ಪ್ರೇಮಾ ಶೆಡ್ತಿ ಹಾಗೂ ಸವಿತಾ ದೇವಾಡಿಗರಿಗೆ ಕರೆ ಮಾಡಿ ತಂದೆಯ ಸಾವಿನ ಬಗ್ಗೆ ವಿಚಾರಿಸಿದಾಗ ಅವರು ಗಾಂಧಿ ಶೆಟ್ಟಿ ತೋಟಕ್ಕೆ ಅಳವಡಿಸಿದ ಐಬೆಕ್ಸ್ ಬೇಲಿಯ ವಿದ್ಯುತ್ ತಗಲಿ ಮೃತಪಟ್ಟಿದ್ದಾಗಿ ತಿಳಿಸಿದ್ದರು ಎಂದರು.
ಪ್ರವೀಣ್ ಕುಮಾರ್ ಅವರು ಶಿವಮೊಗ್ಗದಲ್ಲಿ ನೆಲೆಸಿದ್ದು ಅಲ್ಲಿ ವ್ಯವಹಾರ ಮಾಡಿಕೊಂಡಿದ್ದಾರೆ. ಕಿರ್ಲಾಡಿಯಲ್ಲಿ ತಂದೆ-ತಾಯಿ ಇದ್ದು, ಕೊಲ್ಲೂರಿನಲ್ಲಿದ್ದ ಪ್ರೀತಿ ಶೆಟ್ಟಿ ಹಾಗೂ ಆಕೆಯ ಗಂಡ ರಘುರಾಮ ಶೆಟ್ಟಿ ಹೆಚ್ಚಿನ ವೇಳೆ ಕಿರ್ಲಾಡಿ ಮನೆಯಲ್ಲಿ ತಂದೆ-ತಾಯಿ ಜೊತೆ ಇರುತಿದ್ದರು ಎಂದು ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ.
ಐಬೆಕ್ಸ್ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದರೆ ಮಾನವ ಜೀವಕ್ಕೆ ಹಾನಿ ಯಾಗುತ್ತದೆ ಎಂದು ತಿಳಿದಿದ್ದರೂ, ನಿರ್ಲಕ್ಷ್ಯತನದಿಂದ ಮನೆಯ ತೋಟದ ಐಬೆಕ್ಸ್ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ ಗಾಂಧಿ ಶೆಟ್ಟಿ ಅವರ ಮರಣಕ್ಕೆ ಕಾರಣರಾಗಿದ್ದಾರೆ ಎಂದು ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಂಕರನಾರಾಯಣ ಪೊಲೀಸರು ತನಿಖೆ ನಡೆಸುತಿದ್ದಾರೆ.






