ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ತಿರುವು: ಯುಪಿಸಿಎಲ್ ಗುತ್ತಿಗೆ ಕೈತಪ್ಪಿದಕ್ಕಾಗಿ ಕಿಶೋರ್ ಪೂಜಾರಿಯಿಂದ ಸುಪಾರಿ
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸುದ್ದಿಗೋಷ್ಠಿ

ತಪ್ಪಿಸಲು ಯತ್ನಿಸಿದ ಅನೂಜ್ ಕಾಲಿಗೆ ಗುಂಡೇಟು
ಉಡುಪಿ, ಆ.24: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್ಔಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದಾನಿ ಯುಪಿಸಿಎಲ್ನ ಗುತ್ತಿಗೆ ಕೈತಪ್ಪಿದ ಕಾರಣಕ್ಕಾಗಿ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ, ತನ್ನ ಸಹೋದರ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಶೂಟ್ಔಟ್ ಪ್ರಕರಣದ ಬೆಳವಣಿಗೆಯ ಕುರಿತ ವಿವರ ವಾದ ಮಾಹಿತಿಗಳನ್ನು ನೀಡಿದರು.
ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್ ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದನು. ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕಂಪೆನಿಯ ಪೈಪ್ಲೈನ್ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿ ಯೋಜನೆಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಪೂಜಾರಿ ಕೇಳಿ ಕೊಂಡಿದ್ದನು. ಅದಕ್ಕೆ ಕಂಪೆನಿಯವರು ಕೂಡ ಒಪ್ಪದೆ ಡೇವಿಡ್ ಡಿಸೋಜಗೆ ನೀಡಿದ್ದರು. ಈ ಕೋಟ್ಯಂತರ ರೂ. ಮೊತ್ತದ ಯೋಜನೆ ಕೈತಪ್ಪಿ ಹೋದ ಸಿಟ್ಟಿನಲ್ಲಿ ಕಿಶೋರ್ ಪೂಜಾರಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ತಿಳಿಸಿದರು.
ತನಿಖೆಯ ಸಾಗಿದ ಹಾದಿ: ಆ.7ರಂದು ನಡೆದ ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿ ಗಳಾದ ರಾಜು, ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ಶೇಖ್ರನ್ನು ಬಂಧಿಸಿ, ಅನ್ಮೋಲ್ ಮತ್ತು ಜಿಯಾಹುಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ತನಿಖೆಯಿಂದ ಗುತ್ತಿಗೆಗೆ ಸಂಬಂಧಿಸಿ ಕೋಟ್ಯಂತರ ಹಣಕಾಸಿನ ವಿಚಾರವಾಗಿ ಇವರಿಬ್ಬರಿಗೆ ಡೀಲ್ ನೀಡಿರುವ ವಿಚಾರ ಬೆಳಕಿಗೆ ಬಂತು.
ಅಲ್ಲದೆ ಬಂಧಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಇವರ ಖಾತೆಗೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ಕಂಡುಬಂತು. ಅದರಂತೆ ಅವರನ್ನು ಬಂಧಿಸಿ ತನಿಖೆ ಮುಂದುವರೆಸಿದಾಗ ಇವರೆಲ್ಲರಿಗೂ ಹಣಕಾಸಿನ ವ್ಯವಸ್ಥೆ ಮಾಡಿರುವುದು ಹಾಗೂ ಕೃತ್ಯಕ್ಕೆ ಸೂಪಾರಿ ನೀಡಿರುವುದು ಎರ್ಮಾಳಿನ ಗುತ್ತಿಗೆದಾರ ಕಿಶೋರ್ ಪೂಜಾರಿ ಎಂಬುದು ಪತ್ತೆಯಾಯಿತು ಎಂದು ಅವರು ತಿಳಿಸಿದರು.
ಉತ್ತರ ಭಾರತದ ರಾಜ್ಯದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿರುವ ಬಿಹಾರದ ಸೂರಜ್ ಕುಮಾರ್ ಎಂಬಾತನನ್ನು ಉತ್ತರಖಾಂಡ್ನಲ್ಲಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿತು. ಆಗ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಮೂವರು ಶೂಟರ್ಗಳನ್ನು ವ್ಯವಸ್ಥೆ ಮಾಡಿರುವ ಅನೂಜ್ ಬಗ್ಗೆ ಮಾಹಿತಿ ದೊರೆಯಿತು.
ಅನೂಜ್ ಭಾರತದ ವಿವಿಧೆಡೆ ತಿರುಗಾಡುತ್ತಿರುವುದರಿಂದ ಆತನ ಪತ್ತೆ ದೊಡ್ಡ ಸವಾಲು ಆಗಿತ್ತು. ಸೂರಜ್ ಕುಮಾರ್ ಕೊಟ್ಟ ಮಾಹಿತಿಯಂತೆ ತನಿಖೆ ನಡೆಸಿದ ಪೊಲೀಸರು ಬೆಳಗಾವಿಯ ನಿಪ್ಪಾಣಿಯಲ್ಲಿ ಅನೂಜ್ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
10 ಲಕ್ಷ ರೂ.ಗೆ ಸುಪಾರಿ: ಡೇವಿಡ್ ಡಿಸೋಜ ಹತ್ಯೆಗಾಗಿ ಕಿಶೋರ್ ಪೂಜಾರಿ 10 ಲಕ್ಷ ರೂ. ಮೊತ್ತದ ಸುಪಾರಿ ನೀಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗೆ ಮೂವರು ಶೂಟರ್ಗಳ ಖಾತೆಗೆ ಹಣ ಕೂಡ ಪಾವತಿಯಾಗಿತ್ತು.
ಇದಕ್ಕಾಗಿ ಅನೂಜ್ನನ್ನು ಸಂಪರ್ಕಿಸಲಾಗಿತ್ತು. ಆತ ಮೊದಲು ಇಬ್ಬರು ಶೂಟರ್ಗಳೊಂದಿಗೆ ಮಾತುಕತೆ ನಡೆಸಿದ್ದನು. ಆದರೆ ಹಣದ ವಿಚಾರದಲ್ಲಿ ಅವರು ಈ ಡೀಲ್ಗೆ ಒಪ್ಪದೆ ವಾಪಾಸ್ಸು ಹೋಗಿದ್ದರು. ಇದೀಗ ಆ ಇಬ್ಬರು ಶೂಟರ್ಗಳು ಬೇರೆ ಪ್ರಕರಣದಲ್ಲಿ ಗುಜರಾತ್ ಪೊಲೀಸರಿಂದ ಬಂಧಿತರಾಗಿ ದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅದನ್ನು ಖಚಿತ ಪಡಿಸಬೇಕಾಗಿದೆ. ಅವರು ಇದರಲ್ಲಿ ಭಾಗಿಯಾಗದಿದ್ದರೂ ಸಂಚಿನಲ್ಲಿ ಸೇರಿಕೊಂಡಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಆರಂಭದಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿ ಇದರ ಹಿಂದೆ ಇರುವ ಬಗ್ಗೆ ಸಂಶಯ ಮೂಡಿತ್ತು. ಅದೇ ರೀತಿ ಕೇರಳದ ಕಂಪೆನಿಯ ಬಗ್ಗೆಯೂ ಗುಮಾನಿ ಇತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಈ ಎರಡೂ ಕಂಪೆನಿಗಳು ಈ ಕೃತ್ಯಕ್ಕೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಕರೆ!
ಎರ್ಮಾಳಿನ ಪ್ರಾಜೆಕ್ಟ್ನ್ನು ಕಿಶೋರ್ ಪೂಜಾರಿಗೆ ನೀಡಬೇಕೆಂದು ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಇಂಟರ್ನೆಟ್ ಮೂಲಕ ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜಗೆ ಕರೆ ಬಂದಿತ್ತು. ಆದರೆ ಅವರು ಯಾರು ಇದಕ್ಕೆ ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅದೇ ವ್ಯಕ್ತಿ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರಿಗೂ ಕರೆ ಮಾಡಿ ಮಾತುಕತೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಶೂಟರ್ಗಳು, ಅವರೊಂದಿಗೆ ಸಮನ್ವಯ ಸಾಧಿಸಿರುವ ಅನೂಜ್ ಜೊತೆಯೂ ಹೇಮಂತ್ ಪೂಜಾರಿ ಸಂಪರ್ಕದಲ್ಲಿದ್ದನು ಎಂಬುದು ಕಂಡು ಬಂದಿದೆ. ಹೀಗೆ ಇವರೆಲ್ಲರು ಸೇರಿ ಡೇವಿಡ್ ಡಿಸೋಜ ಕೊಲೆಗೆ ಆರು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು.
‘ಈ ಪ್ರಕರಣದಲ್ಲಿ ನನ್ನ ಅಣ್ಣ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆ ಎಂದು ಕಿಶೋರ್ ಪೂಜಾರಿ ಹೇಳಿದ್ದಾನೆ. ಅದೇ ರಾತ್ರಿ ಆತ, ನಾವಿಬ್ಬರು ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ ಎಂದು ಕೂಡ ತಿಳಿಸಿದ್ದಾನೆ. ಹಾಗಾಗಿ ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆಯೇ ಎಂಬುದು ಇನ್ನೂ ನಮಗೆ ಸ್ಪಷ್ಟತೆ ಸಿಕ್ಕಿಲ್ಲ. ಆ ಬಗ್ಗೆ ತನಿಖೆ ಮಾಡಬೇಕಾಗಿದೆ’ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
‘ಹೇಮಂತ್ ಪೂಜಾರಿ ಕಳೆದ 10ವರ್ಷಗಳಿಂದ ಯಾವುದೇ ಬೆದರಿಕೆ ಕರೆಗಳನ್ನು ಮಾಡಿರುವುದು ವರದಿಯಾಗಿಲ್ಲ. ಆತ ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಬಂಧಿತನಾಗಿಲ್ಲ. ಕಳೆದ 25ವರ್ಷಗಳಿಂದ ತಲೆಮರೆಸಿ ಕೊಂಡಿದ್ದಾನೆ. ಕಿಶೋರ್ ಪೂಜಾರಿ ವಿರುದ್ಧ ಎರಡು ಕೊಲೆ ಪ್ರಕರಣಗಳು ಕೂಡ ಇವೆ. ಹೇಮಂತ್ ಪೂಜಾರಿ ಜೊತೆ ಸೇರಿ ಕೆಲವು ಅಪರಾಧ ಎಸಗಿರುವುದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ತಪ್ಪಿಸಲು ಯತ್ನಿಸಿದ ಅನೂಜ್ ಕಾಲಿಗೆ ಗುಂಡೇಟು!
ಈ ಪ್ರಕರಣದಲ್ಲಿ ಶೂಟರ್ಗಳನ್ನು ವ್ಯವಸ್ಥೆ ಮಾಡಿದ್ದ ಮುಂಬೈನ ನಟೋರಿಯಸ್ ಗ್ಯಾಂಗ್ಸ್ಟಾರ್, ಬಿಹಾರ ರಾಜ್ಯದ ನಳಂದ ನಿವಾಸಿ ಅನುಜ್ ಪಾಟೀಲ್(35) ಎಂಬಾತನನ್ನು ಪೊಲೀಸರು ಇಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬಲ್ಲಿ ಬಂಧಿಸಿದರು.
ಆರೋಪಿಯನ್ನು ಉಡುಪಿಗೆ ಕರೆದುಕೊಂಡು ಬರುವಾಗ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಆತ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿದನು. ಬಳಿಕ ಕೊಲ್ಲೂರು ಠಾಣೆ ಎಸ್ಸೈ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದನು.
ಈ ವೇಳೆ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ್ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದರು. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈತ 2017ರಿಂದ ತಲೆಮರಿಸಿಕೊಂಡಿದ್ದು, ಈತನ ವಿರುದ್ಧ ಮಹಾರಾಷ್ಟ್ರ ದಲ್ಲಿ ಮೋಕಾ ಕಾಯ್ದೆ ದಾಖಲಾಗಿದೆ. ದಾಖಲಾದ ಒಟ್ಟು 11 ಪ್ರಕರಣಗಳಲ್ಲಿ 10 ಪ್ರಕರಣಗಳು ಸಶಸ್ತ್ರ ಕಾಯ್ದೆ ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ ನಲ್ಲಿ ಐದು, ದಾಮನ್ ಮತ್ತು ದಿಯುನಲ್ಲಿ ಒಂದು, ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರಂಭದಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿ ಇದರ ಹಿಂದೆ ಇರುವ ಬಗ್ಗೆ ಸಂಶಯ ಮೂಡಿತ್ತು. ಅದೇ ರೀತಿ ಕೇರಳದ ಕಂಪೆನಿಯ ಜೊತೆಗೂ ಡೇವಿಡ್ಗೆ ಹಣಕಾಸಿನ ವೈಮನಸ್ಸು ಇತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಈ ಎರಡೂ ಕಂಪೆನಿಗಳು ಈ ಕೃತ್ಯಕ್ಕೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.






