ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಇಬ್ಬರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

ಉಡುಪಿ, ಆ.10: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲ ಯವು ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಬಂಧಿತ ಆರೋಪಿಗಳಾದ ಉತ್ತರಖಾಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂಬವರನ್ನು ಪ್ರಕರಣದ ತನಿಖಾಧಿಕಾರಿ ಕಾಪು ಪೊಲೀಸ್ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಸೋಮವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ತನಿಖಾಧಿಕಾರಿ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಧೀಶ ಪುರುಷೋತ್ತಮ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಆರೋಪಿ ಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ಕಾಲಿಗೆ ಗುಂಡೇಟು ತಗುಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಮುಖ ಆರೋಪಿ ರಾಜುನನ್ನು ಮುಂದೆ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಹಾಜರಿದ್ದರು.
ಇಬ್ಬರನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಸ್ಥಳೀಯ ವಾಗಿ ಬೆಂಬಲಿಸಿರುವವರ ಬಗ್ಗೆ ಹಾಗೂ ಇದರ ಹಿಂದೆ ಇರುವ ಸೂತ್ರಧಾರಿಗಳ ಬಗ್ಗೆ ಮಾಹಿತಿ ಕಳೆ ಹಾಕು ತ್ತಿದ್ದಾರೆ ಎಂದು ತಿಳಿದುಬಂದಿದೆ. ಅದೇ ರೀತಿ ಮುಂದೆ ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಕೂಡ ಪೊಲೀಸರು ನಡೆಸಲಿದ್ದಾರೆ.
ಜೈಲಿನಿಂದಲೇ ಸುಪಾರಿ ಡೀಲ್!
ಇದೀಗ ಬಂಧಿತರಾಗಿರುವ ಆರೋಪಿಗಳಾದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಜಿಯಾವುಲ್ಲಾಗೆ ಡೇವಿಡ್ ಡಿಸೋಜ ಹತ್ಯೆಗೆ ಜೈಲಿನಿಂದಲೇ ಸುಫಾರಿ ನೀಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈಗಾಗಲೇ ಹತ್ತಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರಿಗೆ ಜೈಲಿನಲ್ಲಿರುವ ವ್ಯಕ್ತಿಯಿಂದ ಈ ಹತ್ಯೆ ಡೀಲ್ ಮಾಡಲಾಗಿದೆ. ಅದರಂತೆ ಇವರು ಈ ಕೊಲೆ ನಡೆಸಿದ್ದಾರೆ. ಇದೀಗ ಬಂಧಿತರಾಗಿರುವ ಆರೋಪಿ ಗಳಿಗೂ ಸೂತ್ರ ಧಾರಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸ್ ತಂಡದಿಂದ ತನಿಖೆ ಚುರುಕು!
ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಭಾರತಕ್ಕೆ ತೆರಳಿರುವ ಉಡುಪಿಯ ಎರಡು ಪೊಲೀಸ್ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಅದೇ ರೀತಿ ಇನ್ನೊಂದು ತಂಡ ಉತ್ತರ ಭಾರತಕ್ಕೆ ತೆರಳಿ ಬಂಧಿತ ಆರೋಪಿ ಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಕಳೆ ಹಾಕುತ್ತಿದೆ. ಈ ಮೂವರ ವಿರುದ್ಧ ಇರುವ ಪ್ರಕರಣಗಳು, ಇದರಲ್ಲಿ ಯಾವ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ ಮತ್ತು ಶಿಕ್ಷೆಗೆ ಗುರಿಯಾಗಿದ್ದಾರೆಯೇ ಎಂಬುದರ ಬಗ್ಗೆ ತಂಡ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಖತರ್‌ನಾಕ್ ಕಿಲ್ಲರ್ಸ್!
ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಪ್ರತ್ಯೇಕ ರಾಜ್ಯದವ ರಾಗಿದ್ದು, ಒಬ್ಬರಿಗೊಬ್ಬರು ಯಾವುದೇ ಸಂಬಂಧ ಇಲ್ಲದವರು. ಇವರನ್ನು ಈ ಕೃತ್ಯಕ್ಕಾಗಿಯೇ ಒಟ್ಟಾಗಿ ಬಳಸಿಕೊಳ್ಳಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇವರು ಕೃತ್ಯ ನಡೆಸಿದ ಕೂಡಲೇ ಇಲ್ಲಿಂದ ಕುಮಟಾ ಕಡೆ ತೆರಳಿ, ಅಲ್ಲಿಂದ ರೈಲಿನ ಮೂಲಕ ಪರಾರಿಯಾಗಲು ಯೋಜನೆ ಮಾಡಿದ್ದರು. ಆದರೆ ಅದನ್ನು ಉಡುಪಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಛಿದ್ರ ಮಾಡಿ ದರು. ಒಂದು ವೇಳೆ ಪೊಲೀಸ್ ತನಿಖೆಯಲ್ಲಿ ವಿಳಂಬವಾಗುತ್ತಿದ್ದರೆ ಇವರೆಲ್ಲ ತಮ್ಮ ತಮ್ಮ ರಾಜ್ಯಗಳಿಗೆ ತೆರಳಿ ತಲೆಮರೆಸಿಕೊಳ್ಳುತ್ತಿದ್ದಾರೆ.
ಮುಂದೆ ಇವರ ಬಂಧನ ಕೂಡ ಪೊಲೀಸರಿಗೆ ದೊಡ್ಡ ಸವಾಲು ಆಗುತ್ತಿತ್ತು. ಯಾಕೆಂದರೆ ಇವರ ತಲಾ ನಾಲ್ಕೈದು ಹೆಸರುಗಳಿಂದ ಗುರುತಿಸುತ್ತಿದ್ದರು ಮತ್ತು ಇವರಲ್ಲಿ ನಾಲ್ಕೈದು ಗುರುತಿನ ಚೀಟಿ ಇದ್ದವು. ಅದೇ ರೀತಿ ನಾಲ್ಕೈದು ಸಿಮ್, ಮೊಬೈಲ್ ಕೂಡ ಇವರ ಬಳಿ ಇತ್ತು. ಹಾಗಾಗಿ ಇವರ ಶೋಧ ಕಾರ್ಯ ಪೊಲೀಸರಿಗೆ ದೊಡ್ಡ ತಲೆನೋವು ಆಗುತ್ತಿತ್ತು.






